ಮುಂಬೈ: 2021ರ ಮೆಲ್ಬರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFM) ಪ್ರಶಸ್ತಿ ಸಮಾರಂಭಕ್ಕೆ ಇಂದು ತೆರೆ ಬಿದ್ದಿದೆ. ಕೊವೀಡ್-19 ಕಾರಣದಿಂದ IFFM ನ 12ನೇ ಆವೃತ್ತಿಯ ಪ್ರಶಸ್ತಿ ಸಮಾರಂಭವನ್ನು ಅಂತರ್ಜಾಲದ ಮೂಲಕ ನಡೆಸಲಾಯಿತು. ಆಗಸ್ಟ್ 12 ರಿಂದ ಆರಂಭವಾದ ಪ್ರಶಸ್ತಿ ಸಮಾರಂಭವು ಇಂದು ಮುಕ್ತಾಯಗೊಂಡಿತು.
ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಸತ್ಯ ಕಥೆ ಆಧರಿಸಿದ ತಮಿಳಿನ ಸೂರರೈ ಪೊಟ್ರು ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ಅಮೋಘ ಅಭಿನಯಕ್ಕೆ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ ವೆಬ್ ಸೀರೀಸ್ವಿಭಾಗದಲ್ಲಿ ಉತ್ತಮ ನಟನೆಗಾಗಿ ನಟ ಮನೋಜ್ ಬಾಜಪೇಯಿ ಹಾಗೂ ನಟಿ ಸಮಂತಾ ಅಕ್ಕಿನೇನಿ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇನ್ನು ಶೆರ್ನಿ ಚಿತ್ರದ ನಟನೆಗಾಗಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರೆ ಲುಡೋ ಚಿತ್ರದ ನಿರ್ದೇಶನಕ್ಕಾಗಿ ಅನುರಾಗ್ ಬಸು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
ನಿವೃತ್ತ ಸೇನಾಧಿಕಾರಿ ಹಾಗೂ ಕನ್ನಡಿಗ ಜಿಆರ್ ಗೋಪಿನಾಥ್ ಅವರ ಜೀವನ ಆಧಾರಿತ ಚಿತ್ರ ಸೂರರೈ ಪೊಟ್ರು ಚಿತ್ರ ಬಿಡುಗಡೆಯಾದಾಗ ದೇಶಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿತ್ತು. ಅಷ್ಟೇ ಹಣ ಕೂಡ ಗಳಿಸಿತ್ತು. ಈಗ ಅತ್ಯುತ್ತಮ ಚಿತ್ರ ಹಾಗೂ ಅಮೋಘ ಅಭಿನಯಕ್ಕೆ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಸೂರರೈ ಪೊಟ್ರು ಅಭಿಮಾನಿಗಳನ್ನು ಕರೆತರುವಲ್ಲಿ ಯಶಸ್ವಿಯಾದ ಚಿತ್ರ. ಅದು ನನ್ನ 20 ವರ್ಷದ ಸಿನಿಮಾ ವೃತ್ತಿಜೀವನದಲ್ಲಿಯೇ ಮಾಡಿದ ಅತ್ಯುತ್ತಮ ಚಿತ್ರ. ಆ ಚಿತ್ರ ನನ್ನನ್ನು ಸಹ ಬದಲಾಯಿಸಿದೆ. ಚಿತ್ರ ನೋಡಿ ನನಗೆ ನನ್ನ ಮೇಲೆಯೇ ಬೇಸರವಾಯಿತು. ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ ನನ್ನ ನಿರ್ದೇಶಕ ಸುಧಾ ಕೊಂಗಾರ ಅವರಿಗೆ ನಾನು ಕೃತಜ್ಞತೆ ಸಲ್ಲಿಸುವೆ. ಅವರಿಲ್ಲದಿದ್ದರೆ ಈ ಮಾರನ ಪಾತ್ರಕ್ಕೆ ಇಷ್ಟು ಸ್ಪಂದನೆ ಸಿಗುತ್ತಿರಲಿಲ್ಲ ಎಂದು ವರ್ಚುಯಲ್ ಈವೆಂಟ್ನಲ್ಲಿ ಸೂರ್ಯ ತಮ್ಮ ಸಿನಿ ಪಯಣದ ನೆನೆಪು ಹೇಳಿಕೊಂಡಿದ್ದಾರೆ.
ಇನ್ನು ಶೆರ್ನಿ ಚಿತ್ರದಲ್ಲಿನ ಅರಣ್ಯಾಧಿಕಾರಿ ಪಾತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿದ್ಯಾ ಬಾಲನ್, ಕೊರೊನಾ ಸಮಯದಲ್ಲಿ ಚಿತ್ರೀಕರಿಸಲಾದ ಶೆರ್ನಿಗಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಇಂತಹ ಸಮಯದಲ್ಲಿ ಈ ಚಿತ್ರವನ್ನು ನಿರ್ಮಿಸಿದ ನನ್ನ ನಿರ್ಮಾಪಕರು ಹಾಗೂ ಚಿತ್ರ ತಂಡಕ್ಕೆ ಧನ್ಯವಾದ ತಿಳಿಸುವೆ ಎಂದರು.
ಅತ್ಯುತ್ತಮ ವೆಬ್ಸೀರೀಸ್ ಪ್ರಶಸ್ತಿಯನ್ನು ಮಿರ್ಜಾಪುರ್ 2 ಪಡೆದುಕೊಂಡರೆ ಚಿತ್ರರಂಗದಲ್ಲಿನ ವೈಶಿಷ್ಟ್ಯಪೂರ್ಣ ಪಾತ್ರ ನಿರ್ವಹಣೆಗಾಗಿ ನಟ ಪಂಕಜ್ ತ್ರಿಪಾಠಿಯವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ. ಅಭಿಷೇಕ್ ಬಚ್ಚನ್, ಆದಿತ್ಯ ರಾಯ್ ಕಪೂರ್, ರಾಜಕುಮಾರ ರಾವ್, ಸನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಖ್ ಅವರನ್ನು ಅಭಿನ್ನವಾಗಿ ತೋರಿಸಿದ್ದ ಲುಡೋ ಚಿತ್ರದ ನಿರ್ದೇಶನ ಅನುರಾಗ್ ಬಸು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ.
ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಸಮಂತಾ ಕೂಡ ಕೃತಜ್ಞತೆ ಸಲ್ಲಿದ್ದಾರೆ. ಇನ್ನು ಪ್ರಶಸ್ತಿಗಳ ಪಟ್ಟಿಯಲ್ಲಿ ಇವರ ಜೊತೆ ಅನೇಕ ದಕ್ಷಿಣ ಭಾರತೀಯ ಚಿತ್ರಗಳು ಗಮನ ಸೆಳೆದಿವೆ.