ಕನ್ನಡ ಚಿತ್ರರಂಗಕ್ಕೆ 'ಸುಪ್ರಭಾತ', 'ಅಮೃತವರ್ಷಿಣಿ'ಯಂತಹ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ 'ಹಗಲು ಕನಸು' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ದಿನೇಶ್ ಬಾಬು ಹಾಗೂ ಮಾಸ್ಟರ್ ಆನಂದ್ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು.
ಸದ್ಯಕ್ಕೆ ಈ ಸಿನಿಮಾ ಟ್ರೇಲರ್ನಿಂದ ಗಮನ ಸೆಳೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆಯಾಗುವುದು ತಡವಾಗಿದ್ದು, ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾತನಾಡಲು ಮಾಸ್ಟರ್ ಆನಂದ್, ನಿರ್ದೇಶಕ ದಿನೇಶ್ ಬಾಬು, ನಾಯಕಿ ಸನಿಹ ಯಾದವ್, ನಿರ್ಮಾಪಕರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಹಾಗೂ ಇನ್ನಿತರರು ಇಂದು ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಮಾಸ್ಟರ್ ಆನಂದ್ ಹೇಳುವ ಪ್ರಕಾರ ಇದೊಂದು ಕಾಮಿಡಿ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು, ವೀಕೆಂಡ್ನಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯಂತೆ.
![Dinesh babu direction Hagalu kanasu movie](https://etvbharatimages.akamaized.net/etvbharat/prod-images/kn-bng-01-hagalu-kanasu-cinema-changide-aandru-anada-video-7204735_02122019161744_0212f_1575283664_1032.jpg)
ಈ ಚಿತ್ರದಲ್ಲಿ ಸನಿಹ ಯಾದವ್ ಆನಂದ್ಗೆ ಜೋಡಿಯಾಗಿದ್ದು, ವಿಭಿನ್ನ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಹಾಸ್ಯ ಕಲಾವಿದ ಮನದೀಪ್ ರಾಯ್ ಈ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿದ್ದಾರಂತೆ. ಇನ್ನು ಚಿತ್ರದಲ್ಲಿ ನೀನಾಸಂ ಅಶ್ವಥ್, ಅಶ್ವಿನ್ ಹಾಸನ್, ಮನದೀಪ್ ರಾಯ್, ವಾಣಿಶ್ರೀ, ಚೀತ್ಕಾಲ ಬಿರಾದರ್, ಅರುಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿನೇಶ್ ಬಾಬು, ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಕೂಡಾ ಮಾಡಿದ್ದಾರೆ. ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಸದ್ಯಕ್ಕೆ ಮಾಸ್ಟರ್ ಆನಂದ್ 'ಹಗಲು ಕನಸು' ಕಾಣುತ್ತಿದ್ದು, ಇದೇ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
![Hagalu kanasu movie team](https://etvbharatimages.akamaized.net/etvbharat/prod-images/5245020_hagalu.jpg)