ನಟ ಲೋಕೇಶ್, ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಸುಬ್ಬಯ್ಯ ನಾಯ್ಡು ಅವರ ಪುತ್ರ. 1958 ರಲ್ಲಿ 'ಭಕ್ತ ಪ್ರಹ್ಲಾದ' ಚಿತ್ರದ ಮೂಲಕ ಬಾಲನಟ ಆಗಿ ಲೋಕೇಶ್ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ 1974 ರಲ್ಲಿ ಬಿಡುಗಡೆಯಾದ 'ಬೂತಯ್ಯನ ಮಗ ಅಯ್ಯು' ಚಿತ್ರದಿಂದ ಅವರು ಖ್ಯಾತಿ ಗಳಿಸಿದರು. ನಂತರ ಲೋಕೇಶ್ ದಂಪತಿ ಸೇರಿ 'ಪರಸಂಗದ ಗೆಂಡೆತಿಮ್ಮ' ಹಾಗೂ 'ಬ್ಯಾಂಕರ್ ಮಾರ್ಗಯ್ಯ' ಚಿತ್ರಗಳನ್ನು ನಿರ್ಮಿಸಿದರು . ಆದರೆ ಬ್ಯಾಂಕರ್ ಮಾರ್ಗಯ್ಯ ಚಿತ್ರ ಯಶಸ್ವಿಯಾಗಲಿಲ್ಲ.
ಕಾಕನಕೋಟೆ, ಕಾಡು, ದೇವರ ಕಣ್ಣು, ಎಲ್ಲಿಂದಲೋ ಬಂದವರು, ಮುಯ್ಯಿ, ಪಟ್ಟಣಕ್ಕೆ ಬಂದ ಪತ್ನಿಯರು, ಭಕ್ತ ಸಿರಿಯಾಳ, ಭುಜಂಗಯ್ಯನ ದಶಾವತಾರ ಸೇರಿ ಅನೇಕ ಸಿನಿಮಾಗಳಲ್ಲಿ ಲೋಕೇಶ್ ನಟಿಸಿದ್ದಾರೆ. ದಿವಂಗತ ಲೋಕೇಶ್ ಅವರ ಪತ್ನಿ ಗಿರಿಜಾ ಲೋಕೇಶ್, ಮಗ ಸೃಜನ್ ಲೋಕೇಶ್ ಹಾಗೂ ಮಗಳು ಪೂಜಾ ಲೋಕೇಶ್ ಪ್ರತಿ ವರ್ಷ ಲೋಕೇಶ್ ಪ್ರೊಡಕ್ಷನ್ ಅಡಿಯಲ್ಲಿ ಮೂರು ದಿನಗಳ ನಾಟಕೋತ್ಸವವನ್ನು ನಡೆಸುತ್ತಾ ಬಂದಿದ್ದಾರೆ.
ಇನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದವರು. ಅವರು ಆಕ್ಸ್ಫರ್ಡ್ ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದವರು. 8 ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. 1974 ರಲ್ಲಿ ಪದ್ಮಶ್ರೀ ಪ್ರಶಸ್ತಿ, ನಂತರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇವರಿಬ್ಬರಲ್ಲೂ ಒಂದು ಸಾಮ್ಯತೆ ಇದೆ. ಲೋಕೇಶ್ ತಾವು ನಿಧನರಾದ ನಂತರ ದೇಹ ದಾನ ಮಾಡಬೇಕು ಎಂದು ಮೊದಲೇ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ಲೋಕೇಶ್ ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಅವರ ಮಗ ಸೃಜನ್ ಲೋಕೇಶ್ ದಾನ ಮಾಡಿದರು. ಈ ದೇಹ ದಾನದ ಬಗ್ಗೆ ಹಾಗೂ ಅದರ ಮಹತ್ವದ ಬಗ್ಗೆ ಹೆಚ್ಚು ಗಮನ ಬಂದಿದ್ದು ಲೋಕೇಶ್ ಅವರಿಂದಲೇ. ಆಸ್ಪತ್ರೆಯಲ್ಲಿ ಅವರ ದೇಹವನ್ನು ಸುಮಾರು 2 ವರ್ಷಗಳ ಕಾಲ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬಳಸಿಕೊಂಡಿದ್ದರು.
ಯಾವುದೇ ವಿದಿ ವಿಧಾನ ಪೂರೈಸದೆ ಲೋಕೇಶ್ ಅವರ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ನೀಡಲಾಗಿತ್ತು. ಲೋಕೇಶ್ ಅವರು ನಿಧನರಾಗಿದ್ದು ಭಗ್ವಾನ್ ಮಹಾವೀರ್ ಆಸ್ಪತ್ರೆಯಲ್ಲಿ. ಅಲ್ಲಿಯೇ ಅವರ ಕಣ್ಣುಗಳು ಹಾಗೂ ಕಿಡ್ನಿಯನ್ನು ದಾನ ಮಾಡಿದ ನಂತರ ದೇಹವನ್ನು ದಾನ ಮಾಡಲಾಯಿತು.
ಲೋಕೇಶ್ ಅವರದ್ದು ಈ ರೀತಿ ಆದರೆ ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರದ್ದು ಕೂಡಾ ಒಂದು ಆಸೆ ವ್ಯಕ್ತಪಡಿಸಿದ್ದರಂತೆ. ನನ್ನ ಸಾವಿನ ನಂತರ ನನ್ನನ್ನು ನೋಡಲು ಯಾರೂ ಬರುವುದು ಬೇಡ. ಯಾವುದೇ ಸಂಸ್ಕಾರ ನಡೆಸದೆ ದೇಹವನ್ನು ಸುಡಬೇಕು ಎಂದು ಆಸೆ ವ್ಯಕ್ತಪಡಿಸಿದ್ದರಂತೆ. ಹಾಗಾಗಿ ಕೆಲವೇ ಕೆಲವರು ಅವರ ಅಂತಿಮ ದರ್ಶನಕ್ಕೆ ಬಂದಿದ್ದು ಬಿಟ್ಟರೆ ಹೆಚ್ಚು ಜನ ಬಂದಿರಲಿಲ್ಲ.
ಈ ಇಬ್ಬರೂ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಿನಿಮಾಗಳು, ಬರಹಗಳು ಇಂದಿಗೂ ಜೀವಂತವಾಗಿದೆ.