ಗುರುರಾಜ್ ಜಗ್ಗೇಶ್ ನಟನೆಯ ‘ವಿಷ್ಣು ಸರ್ಕಲ್, ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ' ಉಪ ಶೀರ್ಷಿಕೆಯ ಸಿನಿಮಾ ಎರಡು ವರ್ಷಗಳ ನಂತರ ಸುದ್ದಿಯಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.
‘ಪೈಪೋಟಿ’ ನಂತರ ಗುರುರಾಜ್ ಜಗ್ಗೇಶ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. 'ವಿಷ್ಣು ಸರ್ಕಲ್' ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಕಳೆಯಿತು. ಈ ಚಿತ್ರ ತಡವಾಗುವುದಕ್ಕೆ ಕಾರಣ, ನಂದಿನಿ ಲೇಔಟ್ನ ಗಣೇಶ ದೇವಸ್ಥಾನದಲ್ಲಿ ಗುರುರಾಜ್ ಮೇಲೆ ನಡೆದಿದ್ದ ಹಲ್ಲೆ. ಕೊನೆಗೂ ಈ ಚಿತ್ರಕ್ಕೆ ಸೆನ್ಸಾರ್ ಯಾವುದೇ ಕತ್ತರಿ ಪ್ರಯೋಗ ಮಾಡದೆ ಅರ್ಹತಾ ಪತ್ರ ನೀಡಿದೆ. ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರದು ನಿರ್ದೇಶನ ಮಾಡಿರುವ ಲಕ್ಷ್ಮಿ ದಿನೇಶ್ ಹೇಳಿದ್ದಾರೆ. ಇವರು ಈ ಹಿಂದೆ ಹಾಫ್ ಮೆಂಟಲ್' ಚಿತ್ರ ನಿರ್ದೇಶಿಸಿದ್ದರು.
ಪಿಎಲ್ ರವಿ ಛಾಯಾಗ್ರಹಣ, ಶ್ರೀವತ್ಸ ಸಂಗೀತ, ಮೈಸೂರು ರಾಘು ಕಲೆ, ಹೈಟ್ ಮಂಜು ನೃತ್ಯ, ಮಾಸ್ ಮಾದ ಸಾಹಸ ಒದಗಿಸಿರುವ ಈ ಚಿತ್ರದಲ್ಲಿ ದಿವ್ಯಾ ಗೌಡ ಅಭಿನಯಿಸಿದ್ದಾರೆ. ಸಮಿತಾ ವಿನ್ಯಾ, ದತ್ತಣ್ಣ, ಬಿರಾದಾರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಾತ್ರೆ, ನಾಗರಾಜ್, ಯತಿರಾಜ್, ವಿ ಮನೋಹರ್ ಸಂದೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.