ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಅನೇಕ ಸಮಸ್ಯೆಗಳಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ವಿಚಾರ ಕೂಡಾ ಒಂದು. ಕೊನೆಗೂ ನಿನ್ನೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಫಿಲ್ಮ್ ಸಿಟಿ ಸ್ಥಾಪನೆಗೆ ಹೆಸರಘಟ್ಟದ ಬಳಿ 150 ಎಕರೆ ಜಾಗ ನೀಡಲು ನಿರ್ಧರಿಸಿದ್ದಾರೆ.
1984 ರಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರು ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ಎಂದು ಘೋಷಣೆ ಮಾಡಿ ಹೆಸರಘಟ್ಟದ ಬಳಿ 350 ಎಕರೆ ಜಾಗವನ್ನು ನಿಗದಿ ಮಾಡಿದ್ದರು. ಅದರ ಬಗ್ಗೆ ಚಿತ್ರರಂಗ ಸಂತೋಷ ವ್ಯಕ್ತಪಡಿಸಿತ್ತು. ಆದರೆ ಕಳೆದ 35 ವರ್ಷಗಳಿಂದ ಈ ಹೆಸರ ಘಟ್ಟದ ಫಿಲ್ಮ್ ಸಿಟಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂದುಕೊಂಡಿದ್ದ ಸ್ಥಳದಲ್ಲಿ 10 ಎಕರೆ ಜಾಗವನ್ನು ಕೆಲವೊಂದು ಸಂಸ್ಥೆಗಳಿಗೆ ನೀಡಲಾಯ್ತು. ನಂತರ ಪಕ್ಕದಲ್ಲಿ ರೆಸಾರ್ಟ್ ಸ್ಥಾಪನೆ ಮಾಡಲು ಬಂದವರಿಂದ ಸ್ವಲ್ಪ ಜಾಗ ಒತ್ತುವರಿ ಆಯ್ತು. ಜೊತೆಗೆ ಇಲ್ಲಿ ಪ್ರೊತಿಮಾ ಬೇಡಿ ಅವರ ನೃತ್ಯ ಗ್ರಾಮ ಕೂಡಾ ತಲೆ ಎತ್ತಿತು.
ರಾಮಕೃಷ್ಣ ಹೆಗಡೆ ನಂತರ ಬಂದ ಹಲವಾರು ಮುಖ್ಯಮಂತ್ರಿಗಳು ಅವರಿಗೆ ಇಷ್ಟವಾದ ಸ್ಥಳಗಳನ್ನು ಘೋಷಣೆ ಮಾಡಿ ಫಿಲ್ಮ್ ಸಿಟಿ ಪ್ರಾರಂಭ ಆಗಲಿದೆ ಎಂದು ಹೇಳಿಕೆ ಕೊಟ್ಟರು. ಈ ಮಧ್ಯೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ಒಂದು ಫಿಲ್ಮ್ ಸಿಟಿ ಮಾಡೆಲ್ ಸ್ಥಾಪಿಸಿ ಆಗ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ. ದೇವೇಗೌಡ ಅವರಿಂದ ಫಿಲ್ಮ್ ಸಿಟಿ ಹೆಸರಿನ ಸಮಾರಂಭವನ್ನು ಕೂಡಾ ಮಾಡಿದ್ದರು. ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಫಿಲ್ಮ್ ಸಿಟಿ ಸ್ಥಾಪನೆಗೆ ರಾಮನಗರ ಸೂಕ್ತವಾದ ಸ್ಥಳ, ಮೈಸೂರಿನಲ್ಲಿ ಬೇಕಾದರೆ 'ಡಿಸ್ನಿ ಲ್ಯಾಂಡ್' ರೀತಿಯ ಮನರಂಜನಾ ಪಾರ್ಕ್ ಮಾಡೋಣ ಅಂದರು.
ಮೈಸೂರು, ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸೂಕ್ತ ಜಾಗವಾಗಿದ್ದು 108 ಎಕರೆ ಜಾಗ ನಿಗದಿ ಆಗಿದೆ ಎಂದು ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ನಂತರ ಕನಕಪುರ ಬಳಿ ಇರುವ ರೋರಿಚ್ ಎಸ್ಟೇಟ್ ಬಳಿ ಫಿಲ್ಮ್ ಸಿಟಿಗೆ ಸೂಕ್ತವಾದ ಸ್ಥಳ ಎಂಬ ಮಾತು ಕೇಳಿ ಬಂದಿತ್ತು. ಮೈಸೂರು ಫಿಲ್ಮ್ ಸಿಟಿಗೆ ಸೂಕ್ತವಾದ ಸ್ಥಳ ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಕೂಡಾ ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದರು.
ಇಷ್ಟೆಲ್ಲಾ ಆಗುತ್ತಿದ್ದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಒಂದು ಗಟ್ಟಿಯಾದ ನಿಲುವು ಹೊರಬರಲೇ ಇಲ್ಲ. ಈಗ ಹೆಸರಘಟ್ಟದ ಬಳಿ ಫಿಲ್ಮ್ ಸಿಟಿಯನ್ನು ನಿರ್ಮಾಣ ಮಾಡುವುದಾಗಿ ನಿನ್ನೆ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಘೋಷಿಸಿದ್ದಾರೆ. ಪಶು ಸಂಗೋಪನಾ ಇಲಾಖೆಗೆ ಸೇರಿದ ಸುಮಾರು 450 ಎಕರೆ ಜಾಗದಲ್ಲಿ 150 ಎಕರೆ ಜಾಗವನ್ನು ಫಿಲ್ಮ್ ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಇನ್ನು 5 ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿಯಲಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ನಿಗದಿಪಡಿಸಿದ ಸ್ಥಳದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲು ಇನ್ನು ಎಷ್ಟು ವರ್ಷಗಳು ಕಾಯಬೇಕೋ ಗೊತ್ತಿಲ್ಲ.