ಎಸ್ತರ್ ನೊರೊನ್ಹಾ ಹೊಸ ಚಿತ್ರವೊಂದರ ಮೂಲಕ ಸಂಗೀತ ನಿರ್ದೇಶಕಿಯಾದರು ಎಂಬ ಸುದ್ದಿಯೊಂದು ಕಳೆದ ವಾರವಷ್ಟೇ ಕೇಳಿಬಂದಿತ್ತು. ಸದ್ಯದಲ್ಲೇ ಈ ಚಿತ್ರ ಸೆಟ್ಟೇರಲಿದೆ ಎಂದು ಸುದ್ದಿಯಾಗಿತ್ತು. ಈಗ ನೋಡಿದರೆ, ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ, ಮುಕ್ತಾಯವಾಗಿದ್ದು, ಈಗ ಈ ಚಿತ್ರದ ಹೆಸರು ಅನಾವರಣಗೊಂಡಿದೆ.
ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ದಿ ವೇಕೆಂಟ್ ಹೌಸ್'. ಇತ್ತೀಚೆಗಷ್ಟೇ ಪೋಸ್ಟರ್ ಬಿಡುಗಡೆಯಾಗಿರುವ ಈ ಚಿತ್ರವು ಕನ್ನಡ ಮತ್ತು ಕೊಂಕಣಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಜಾನೆಟ್ ನರೋನ್ಹಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಾನೆಟ್ ನರೋನ್ಹಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ 'ಸೋಫಿಯಾ' ಹಾಗೂ ಜಾಕಿಶ್ರಾಫ್ ಅಭಿನಯದ 'ಕಾಂತಾರ್' ಚಿತ್ರಗಳನ್ನು ಜಾನೆಟ್ ನೊರೊನ್ಹಾ ನಿರ್ಮಿಸಿದ್ದು, ಇದು ಅವರ ಮೂರನೆಯ ಚಿತ್ರವಾಗಿದೆ. ಕುತೂಹಲಕಾರಿ ಕಥೆಯುಳ್ಳ ಈ ಚಿತ್ರವನ್ನು ಶ್ರೇಯಸ್ಸ್ ಚಿಂಗಾ ನಿರ್ದೇಶಿಸಿದ್ದಾರೆ. ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಶಕೀಲ' ಚಿತ್ರಕ್ಕೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಶ್ರೇಯಸ್, ಈ ಚಿತ್ರವನ್ನು ಸ್ವತಂತ್ರವಾಗಿ ನಿರ್ದೇಶಿಸುವುದರ ಜೊತೆಗೆ ಚಿತ್ರದಲ್ಲಿ ಹೀರೋ ಆಗಿಯೂ ನಟಿಸುತ್ತಿದ್ದಾರೆ.
ಎಸ್ತರ್ ನೊರೊನ್ಹಾನಾಯಕಿಯಾಗಿ ಅಭಿನಯಿಸುವುದರ ಜೊತೆಗೆ ಸಂಗೀತ ನಿರ್ದೇಶಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.