ಹೈದರಾಬಾದ್: ಟಾಲಿವುಡ್ನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್, ನಟಿ ಮತ್ತು ನಿರ್ಮಾಪಕಿ ಚಾರ್ಮಿ ಕೌರ್, ನಟರಾದ ರಾಣಾ ದಗ್ಗುಬಾಟಿ, ರವಿತೇಜಾ, ನವದೀಪ್ ಸೇರಿದಂತೆ ಹಲವರನ್ನು ಕರೆದು ಮಾಹಿತಿ ಪಡೆದಿದೆ.
ಡ್ರಗ್ಸ್ ಪ್ರಕರಣದ ಜೊತೆಗೆ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ಇಂದು ವಿಚಾರಣೆಗೆ ಹಾಜರಾಗಿದ್ದು ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎನ್ನಲಾಗುತ್ತಿದೆ.
ಡ್ರಗ್ಸ್ ಸಪ್ಲೈ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿಯನ್ನು ಸತತ ಆರು ಗಂಟೆಗಳ ಕಾಲ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ವಿಚಾರಣೆ ವೇಳೆ ನಟಿಯು ತಮ್ಮ ಎಲ್ಲ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುಂತೆ ಒಟ್ಟು 12 ಜನರಿಗೆ ನೋಟಿಸ್ ನೀಡಿತ್ತು. ಇದರಲ್ಲಿ ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ ಕೌರ್, ನಟರಾದ ರಾಣಾ ದಗ್ಗುಬಾಟಿ, ರವಿತೇಜಾ, ನವದೀಪ್ ಸೇರಿದಂತೆ ಹಲವರನ್ನು ಕರೆದು ವಿಚಾರಣೆ ನಡೆಸಿತ್ತು.
ಸಿನಿಮಾವೊಂದರ ಚಿತ್ರೀಕರಣದಲ್ಲಿದ್ದೇನೆ. ಹಾಗಾಗಿ ವಿಚಾರಣೆಗೆ ಬರಲು ಕಾಲಾವಕಾಶ ಮಾಡಿಕೊಡುವಂತೆ ನಟಿ ರಾಕುಲ್ ಪ್ರೀತ್ ಸಿಂಗ್ ಇಡಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ಇಂದು ಇಡಿ ಅಧಿಕಾರಿಗಳ ಮುಂದೆ ನಟಿ ಹಾಜರಾಗಿದ್ದರು. ಈ ತಿಂಗಳ 6 ರಂದು ಜಾರಿ ನಿರ್ದೇಶನಾಲಯ ನಟಿಗೆ ನೋಟಿಸ್ ನೀಡಿತ್ತು. ನೀಡಿದ ಸಮಯದೊಳಗೆ ನಟಿಯು ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ ಎನ್ನಲಾಗುತ್ತಿದೆ.