ಬೆಂಗಳೂರು: ನಿನ್ನೆ ಬಾಲಿವುಡ್ ಶೆಹೆನ್ ಶಾ, ಬಿಗ್ ಬಿ ಖ್ಯಾತಿಯ ಅಮಿತಾಭ್ ಬಚ್ಚನ್ ಅವರ ಹುಟ್ಟುಹಬ್ಬ. ಇಡೀ ವಿಶ್ವವೇ ಅಗ್ರ ನಟನಿಗೆ ಶುಭಾಶಯ ಕೋರಿದೆ.
ಈ ಸಮಯದಲ್ಲಿ ಕನ್ನಡ ನಾಡಿಗೂ ಬಿಗ್ ಬಿಗೂ ಇರುವ ಸಂಬಂಧವನ್ನು ಹಲವರು ಮೆಲುಕುಹಾಕಿದ್ದಾರೆ.
ಕನ್ನಡ ನಾಡಿನ ಬಗ್ಗೆ ಅಮಿತಾಭ್ಗೆ ವಿಶೇಷ ಅಭಿಮಾನವಿದೆ. ಬೆಂಗಳೂರು ಏರ್ ಕಂಡೀಶನ್ ಸಿಟಿ ಎಂದು ಅಮಿತಾಭ್ ಕೌನ್ ಬನೇಗಾ ಕರೋಡ್ ಪತಿಯಲ್ಲಿ ನೆನಪಿಸಿಕೊಂಡಿದ್ರು.
ಬಿಗ್ ಬಿ ಅವರ ಚಿತ್ರ ರಂಗದ ಬದುಕನ್ನೇ ಬದಲಿಸಿದ್ದು ಕರ್ನಾಟಕ. ರಮೇಶ್ ಸಿಪ್ಪಿ ನಿರ್ದೇಶನದ ಶೋಲೆ ಸಿನಿಮಾ ಎರಡು ವರ್ಷಗಳ ಕಾಲ ರಾಮನಗರದ ಶೋಲೆ ಗುಡ್ಡದಲ್ಲಿ ಚಿತ್ರೀಕರಣವಾಗಿದೆ.
ಬೆಂಗಳೂರಿನಿಂದ ರಾಮನಗರಕ್ಕೆ ಕಿರು ರಸ್ತೆ ನಿರ್ಮಿಸಿದ್ದು ಚಿತ್ರ ತಂಡ. ಬೆಟ್ಟದ ಮೇಲೊಂದು ಪುಟ್ಟ ನಗರವನ್ನು ನಿರ್ಮಿಸಿ ಎರಡು ವರ್ಷಗಳ ಕಾಲ ಚಿತ್ರೀಕರಣ ನಡೆಸಿದ್ದ ಸಿನಿಮಾ ಟೀಮ್.
ಕೂಲಿ ಸಿನಿಮಾ ಬಹುತೇಕ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು. ಮೆಜೆಸ್ಟಿಕ್ ರೈಲು ನಿಲ್ದಾಣ, ಬೆಂಗಳೂರು ವಿವಿ ಕ್ಯಾಂಪಸ್, ಕಬ್ಬನ್ ಪಾರ್ಕ್ ಮೊದಲಾದ ಜಾಗಗಳಲ್ಲಿ ಶೂಟಿಂಗ್ ನಡೆಯಿತು.
ಇದೇ ಸಿನಿಮಾದ ಚಿತ್ರೀಕರಣದ ವೇಳೆ ಬಿಗ್ ಬಿ ಅವರು ಡಾ. ರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಕೂಲಿ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರದಲ್ಲಿ ನಟಿಸುವಂತೆ ಅಣ್ಣಾವ್ರನ್ನ ಕೋರಿಕೊಂಡಿದ್ದರು.
ಅಣ್ಣಾವ್ರು ರೈಲಿನಿಂದ ಇಳಿಯುವಾಗ ಲಗೇಜ್ ಹೊರುವ ಅಮಿತಾಭ್ ಅವರ ಮೇಲಿನ ಗೌರವಕ್ಕೆ ಹಣ ಬೇಡ ಎನ್ನುವ ಸನ್ನಿವೇಶ ಅದು. ಆದರೆ, ವಿನಯ ಪೂರ್ವಕವಾಗಿಯೇ ಈ ಆಫರ್ಅನ್ನು ತಿರಸ್ಕರಿಸಿದ್ದ ಅಣ್ಣಾವ್ರು, ಕ್ಷಮಿಸಿ ಅಮಿತಾಭ್ ಜಿ ನಾನು ಕನ್ನಡ ಬಿಟ್ಟು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿ ಕ್ಷಮೆ ಕೋರಿದ್ದರಂತೆ.
ತಮ್ಮ ಬಳಿ ಕ್ಷಮೆ ಕೋರಿದ ಅಣ್ಣಾವ್ರ ದೊಡ್ಡ ಗುಣ ಅಮಿತಾಭ್ ಅವರಿಗೆ ಇಷ್ಟವಾಯಿತಂತೆ. ಅಣ್ಣಾವ್ರು ಹಾಗೂ ಅಮಿತಾಭ್ ಇಬ್ಬರೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.