'ಟಗರು' ಚಿತ್ರದಿಂದ ಡಾಲಿ ಎಂದೇ ಖ್ಯಾತರಾದ ನಟ ಧನಂಜಯ್ ಹುಟ್ಟಿದ ದಿನ ಇಂದು. 'ಡೈರೆಕ್ಟರ್ ಸ್ಪೆಷಲ್' ಚಿತ್ರದಿಂದ ತಮ್ಮ ವೃತ್ತಿ ಬದುಕು ಆರಂಭಿಸಿದ ಧನಂಜಯ್ ಇದೀಗ ಡೈರೆಕ್ಟರ್ಗಳಿಗೆ ನಿಜವಾಗಿಯೂ ಸ್ಪೆಷಲ್ ಆಗಿ ಹೋಗಿದ್ದಾರೆ. ಅಲ್ಲದೆ ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆಯ ಕಲ್ಲೇನಹಳ್ಳಿಯಲ್ಲಿ ಜನಿಸಿದ ಧನಂಜಯ್, ಅರಸೀಕರೆಯಲ್ಲಿ ಶಾಲಾ ಶಿಕ್ಷಣ ಮುಗಿಸಿದರು. ಚಿಕ್ಕಂದಿನಲ್ಲೇ ತಂದೆಯೊಂದಿಗೆ ನಾಟಕಗಳನ್ನು ನೋಡುತ್ತಾ, ಅಭಿನಯಿಸುತ್ತಾ ಬೆಳೆದರು. ಮೈಸೂರಿನ ಜೆಸಿಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಡಾಲಿ ರ್ಯಾಂಕ್ ಸ್ಟೂಡೆಂಟ್ ಕೂಡಾ ಆಗಿದ್ದರು. ಇನ್ಫೋಸಿಸ್ನಲ್ಲಿ ಕೆಲಸಕ್ಕೆ ಅವಕಾಶ ದೊರೆತರೂ ಡಾಲಿ ಮನಸ್ಸು ಮಾತ್ರ ಆ್ಯಕ್ಟಿಂಗ್ ಕಡೆ ಸೆಳೆಯುತ್ತಿತ್ತು. ಮೈಸೂರಿನ ಖ್ಯಾತ ರಂಗಭೂಮಿ ಸಂಸ್ಥೆ 'ರಂಗಾಯಣ'ಕ್ಕೆ ಆಗಾಗ್ಗೆ ಹೋಗುತ್ತಿದ್ದಲ್ಲದೆ ಕೆಲವೊಂದು ನಾಟಕಗಳಲ್ಲಿ ಕೂಡಾ ಅಭಿನಯಿಸುತ್ತಿದ್ದರು.
ಒಮ್ಮೆ ನಿರ್ದೇಶಕ ಗುರುಪ್ರಸಾದ್ ಕಣ್ಣಿಗೆ ಬಿದ್ದ ಧನಂಜಯ್ಗೆ 'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ನಟಿಸುವ ಅದೃಷ್ಟ ಒಲಿದುಬಂತು. ಸಿನಿಮಾ ಯಶಸ್ವಿಯಾಗದಿದ್ದರೂ ಅಳುಕದ ಧನಂಜಯ್, ದೊರೆತ ಅವಕಾಶಗಳನ್ನು ಮಾತ್ರ ಬಿಡಲಿಲ್ಲ. ರಾಟೆ, ಜೆಸ್ಸಿ, ಎರಡನೇ ಸಲ, ಹ್ಯಾಪಿ ನ್ಯೂ ಇಯರ್ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಸೂರಿ ನಿರ್ದೇಶನದ 'ಟಗರು' ಸಿನಿಮಾ. ನಂತರ ರಾಮ್ಗೋಪಾಲ್ ವರ್ಮಾ ನಿರ್ದೇಶನದ ತೆಲುಗು, ಕನ್ನಡದಲ್ಲಿ ತಯಾರಾದ 'ಭೈರವ ಗೀತ' ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಜನರಿಗೂ ಪರಿಚಯವಾದರು. ಇದೀಗ ಧನಂಜಯ್ ಕೈಯಲ್ಲಿ ಪಾಪ್ಕಾರ್ನ್ ಮಂಕಿ ಟೈಗರ್, ತೋತಾಪುರಿ, ಯುವರತ್ನ, ಪೊಗರು, ಡಾಲಿ, ಸಲಗ, ವಿಜಯಧ್ವಜ ಸೇರಿ ಸಾಕಷ್ಟು ಸಿನಿಮಾಗಳಿವೆ.
ಇಂದು ಧನಂಜಯ್ ಹುಟ್ಟುಹಬ್ಬದ ಅಂಗವಾಗಿ ಅವರ ಹೊಸ ಸಿನಿಮಾ 'ಬಡವ ರ್‍ಯಾಸ್ಕಲ್' ಸೆಟ್ಟೇರುತ್ತಿದೆ. ಧನಂಜಯ್ ನಟ ಮಾತ್ರವಲ್ಲದೆ ಬರಹಗಾರ ಕೂಡಾ. ಜೊತೆಗೆ ಕೆಲವೊಂದು ಸಿನಿಮಾ ಹಾಡುಗಳಿಗೆ ಸಾಹಿತ್ಯ ಕೂಡಾ ಬರೆದಿದ್ದಾರೆ. ಉತ್ತರ ಕರ್ನಾಟಕದ ಜನರು ನೆರೆಯಿಂದ ಕಷ್ಟಪಡುತ್ತಿದ್ದಾರೆ. ನನಗೆ ಹೂವಿನ ಹಾರ, ಕೇಕ್, ಗಿಫ್ಟ್ಗಳನ್ನು ತರಬೇಡಿ. ಅದೇ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಿ ಎಂದು ಧನಂಜಯ್ ಈ ಮೊದಲೇ ಹೇಳಿದ್ದರು. ಆದರೂ ಅಭಿಮಾನಿಗಳು ಮಾತ್ರ ತಮ್ಮ ಮೆಚ್ಚಿನ ನಟನ ಬರ್ತಡೇಯನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಮಂದಿ ಸೇರಿದಂತೆ ಧನಂಜಯ್ ಸ್ನೇಹಿತರು, ಅಭಿಮಾನಿಗಳು ಅವರಿಗೆ ಬರ್ತಡೇ ಶುಭ ಕೋರಿದ್ದಾರೆ.