ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೇ. 75ರಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿ ವಿಶೇಷ ಸೆಟ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಶೂಟಿಂಗ್ ಜರುಗಿದೆ.
ಇನ್ನು ಚಿತ್ರದಲ್ಲಿ ಧ್ರುವಾ ಎರಡು ಶೇಡ್ಗಳಲ್ಲಿ ಅಭಿನಯಿಸಿದ್ದಾರೆ. ಶಾಲಾ ವಿದ್ಯಾರ್ಥಿ ಪಾತ್ರ ಮಾಡಲು ಈ ಮುನ್ನ ಧ್ರುವಾ 26 ಕೆಜಿ ತೂಕ ಇಳಿಸಿಕೊಂಡಿದ್ದರು. ಧ್ರುವಾ ತಮ್ಮ ಕ್ಯಾರೆಕ್ಟರ್ಗಾಗಿ ಹೇಗೆ ಬೇಕಾದರೂ ಬಾಡಿ ಬಿಲ್ಡ್ ಮಾಡುತ್ತಾರೆ. ಇದೀಗ ತೂಕವನ್ನು ಹೆಚ್ಚಿಸಿಕೊಳ್ಳಲು ಮತ್ತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಉದ್ದವಾದ ಕೂದಲು ಬಿಟ್ಟು, ಹೀಗೆ ಮುಖ ಮುಚ್ಚಿಕೊಂಡು ಬೈಸಿಪ್ಗಾಗಿ ವರ್ಕ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿ.ಕೆ. ಗಂಗಾಧರ್ ಬಂಡವಾಳ ಹೂಡಿರುವ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಮಯೂರಿ, ಡಾಲಿ ಧನಂಜಯ್, ಜಗಪತಿ ಬಾಬು, ರವಿಶಂಕರ್, ದೀಪಕ್ ಶೆಟ್ಟಿ, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್ ಹಾಗೂ ಇನ್ನಿತರರು ನಟಿಸಿದ್ದಾರೆ.