ಡಾ. ರಾಜ್ಕುಮಾರ್ ಮೊಮ್ಮಗಳು ಮತ್ತು ನಟ ರಾಮ್ ಕುಮಾರ್ ಮಗಳು ಧನ್ಯಾ ರಾಮ್ ಕುಮಾರ್, ನಿನ್ನ ಸನಿಹಕೆ ಎಂಬ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿರುವ ವಿಷಯ ಎರಡು ವರ್ಷ ಹಳೆಯದು. ಚಿತ್ರದ ಕೆಲಸಗಳೆಲ್ಲ ಮುಗಿದು ಆಗಸ್ಟ್ 20ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಈ ಮಧ್ಯೆ, ಕಾಲಿವುಡ್ಗೆ ಧನ್ಯಾ ಹಾರೋದಕ್ಕೆ ರೆಡಿಯಾಗಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿದೆ. ತಮಿಳಿನ ಪಿಆರ್ಒ ಒಬ್ಬರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಧನ್ಯಾ ಸದ್ಯದಲ್ಲೇ ಕಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಈ ವಿಷಯವನ್ನು ಧನ್ಯಾ ಸಹ ಒಪ್ಪಿಕೊಳ್ಳುತ್ತಾರೆ. ತಮಿಳಿನಲ್ಲಿ ನಟಿಸುತ್ತಿರುವ ವಿಷಯ ನಿಜ ಎಂದು ಹೇಳಿಕೊಂಡಿದ್ದಾರೆ. ನಿನ್ನ ಸನಿಹಕೆ ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಬಂದಾಗಲೇ ಅವರಿಗೆ ಬೇರೆ ಭಾಷೆಗಳಲ್ಲೂ ನಟಿಸುವುದಕ್ಕೆ ಆಹ್ವಾನ ಬಂದಿದೆಯಂತೆ. ಆದರೆ, ಕನ್ನಡದಲ್ಲಿ ಮೊದಲ ಸಿನಿಮಾ ಬಿಡುಗಡೆಯಾಗಲಿ. ನಂತರ ಬೇರೆ ಭಾಷೆಗಳತ್ತ ಯೋಚನೆ ಎಂದು ಅವರು ಸುಮ್ಮನಿದ್ದರಂತೆ.
ಇದೀಗ, ನಿನ್ನ ಸನಿಹಕೆ ಬಿಡುಗಡೆಗೆ ಸಿದ್ಧವಿದ್ದು ಆ ಚಿತ್ರ ಮುಗಿಯುತ್ತಿದ್ದಂತೆಯೇ ಇನ್ನೂ ಒಂದು ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ. ಆ ನಂತರ ಕಾಲಿವುಡ್ ಚಿತ್ರ ಎಂದು ಅವರು ಹೇಳಿಕೊಂಡಿದ್ದಾರೆ. ನಿನ್ನ ಸನಿಹಕೆ ಚಿತ್ರವನ್ನು ಸೂರಜ್ ಗೌಡ ನಿರ್ದೇಶಿಸಿದ್ದು, ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್ ಸಂಸ್ಥೆಯು ನಿರ್ಮಿಸಿರುವ ಈ ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ.