ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮಾರ್ಚ್ 11ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕರ್ನಾಟಕವಷ್ಟೇ ಅಲ್ಲ ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲೂ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಮೂರೂ ರಾಜ್ಯಗಳಿಂದ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾ ಟೀಸರ್ ನೋಡಿ ತೆಲುಗು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
'ರಾಬರ್ಟ್' ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡಬೇಕು ಎಂದು ದರ್ಶನ್ ಆಸೆ ಪಟ್ಟಿದ್ದರು. ಅದೇ ಕಾರಣಕ್ಕೆ ಓಟಿಟಿಯಲ್ಲಿ ಬಿಡುಗಡೆ ಮಾಡಲು ಅವಕಾಶ ಸಿಕ್ಕರೂ ಅಲ್ಲಿ ಬಿಡುಗಡೆ ಮಾಡಿಲ್ಲ. ಚಿತ್ರಮಂದಿರಗಳಲ್ಲೇ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂಬ ದರ್ಶನ್ ಅವರ ಒಂದು ಆಸೆಯೇನೋ ಕೈಗೂಡಿದೆ. ಆದರೆ, ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂಬ ಪ್ರಯತ್ನ ವಿಫಲವಾಗಿದೆ. ದರ್ಶನ್ ಅವರಿಗೂ ಬೆಂಗಳೂರಿನ ನರ್ತಕಿ ಚಿತ್ರಮಂದಿರಕ್ಕೂ ಬಹಳ ಹಳೆಯ ನಂಟು. ಅವರ ಬಹುತೇಕ ಚಿತ್ರಗಳು ಅಲ್ಲೇ ಬಿಡುಗಡೆಯಾಗಿರುವುದರಿಂದ, 'ರಾಬರ್ಟ್' ಸಹ ಅಲ್ಲೇ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಅದಕ್ಕೆ ಸಹ ದರ್ಶನ್ ಕೂಡಾ ನರ್ತಕಿ ಚಿತ್ರಮಂದಿರ ತೆಗೆದ ನಂತರ ಅಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಕಾದಿದ್ದರು. ಆದರೆ, ಈಗ ಆ ಚಿತ್ರಮಂದಿರ ಅವರ ಕೈತಪ್ಪಿದೆ. ಅದಕ್ಕೆ ಕಾರಣ 'ಪೊಗರು' ಸಿನಿಮಾ.
ಇದನ್ನೂ ಓದಿ: ಆಡಿಯೋ ವೈರಲ್ ಆರೋಪ; ಪ್ರಕರಣಕ್ಕೆ ಸ್ಪಷ್ಟನೆ ನೀಡಿದ ಜಗ್ಗೇಶ್
ಧ್ರುವ ಅಭಿನಯದ 'ಪೊಗರು' ಚಿತ್ರ ಫೆಬ್ರವರಿ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಮುಖ್ಯ ಚಿತ್ರಮಂದಿರವಾಗಿ ನರ್ತಕಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ದರ್ಶನ್ ಅವರಂತೆಯೇ ಧ್ರುವಗೂ ನರ್ತಕಿ ಚಿತ್ರಮಂದಿರ ಫೇವರೇಟ್. ಅವರ ಹಿಂದಿನ ಚಿತ್ರಗಳು ಅಲ್ಲೇ ರಿಲೀಸ್ ಆಗಿದ್ದು ಈ ಸಿನಿಮಾ ಕೂಡಾ ಅಲ್ಲೇ ರಿಲೀಸ್ ಆಗಲಿ ಎಂದು ಆಸೆ ಪಟ್ಟಿದ್ದರು. ಅದರಂತೆ ಫೆಬ್ರವರಿ 19ರಂದು ಚಿತ್ರ ಬಿಡುಗಡೆಯಾಗಲಿದೆ. ಅದಾಗಿ ಎರಡು ವಾರಗಳ ಅಂತರದಲ್ಲಿ 'ರಾಬರ್ಟ್' ಬಿಡುಗಡೆಯಾಗಲಿರುವುದರಿಂದ, ದರ್ಶನ್‍ಗೆ ನರ್ತಕಿ ಮಿಸ್ ಆಗಲಿದೆ. 'ಪೊಗರು' ಚಿತ್ರಕ್ಕೆ ಇರುವ ಕ್ರೇಜ್ ನೋಡಿದರೆ, ಚಿತ್ರ ಏನಿಲ್ಲವೆಂದರೂ 50 ದಿನಗಳ ಕಾಲ ಪ್ರದರ್ಶನ ಕಾಣಲಿದೆ. ಹಾಗಾಗಿ ದರ್ಶನ್, ಅನಿವಾರ್ಯವಾಗಿ ನರ್ತಕಿ ಬಿಟ್ಟು ಬೇರೆ ಚಿತ್ರಮಂದಿರವನ್ನು ನೋಡಿಕೊಳ್ಳಬೇಕಾಗಿದೆ. ನರ್ತಕಿಯ ಪರ್ಯಾಯವಾಗಿ 'ರಾಬರ್ಟ್' ಯಾವ ಥಿಯೇಟರ್ನಲ್ಲಿ ಬಿಡುಗಡೆಯಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.