ದಂಡುಪಾಳ್ಯ ಭಾಗ 1 , 2 ಹಾಗೂ 3 ನೇ ಭಾಗ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಒಂದು ಮಟ್ಟಿಗೆ ಸುದ್ದಿಯಾಗಿದೆ. ಇದೀಗ ದಂಡುಪಾಳ್ಯ ಭಾಗ 4 ಎಂದೇ ಟೈಟಲ್ ಇಟ್ಟುಕೊಂಡು ಕಳೆದ ಎರಡು ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾಗಿರುವ ಸಿನಿಮಾ ನವೆಂಬರ್ 1 ರಂದು ತೆರೆಗೆ ಬರುತ್ತಿದೆ.
ಈ ಸಿನಿಮಾದಲ್ಲಿ ಎವರ್ ಗ್ರೀನ್ ಹೀರೋಯಿನ್ ಸುಮನ್ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೋಸ್ಟರ್ ಹಾಗೂ ಟ್ರೇಲರ್ನಿಂದ ಸಿನಿಮಾ ಮೇಲೆ ಕನ್ನಡಿಗರಿಗೆ ಕುತೂಹಲ ಹೆಚ್ಚಾಗಿದೆ. ನಿನ್ನೆ ಸಿನಿಮಾದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಚಿತ್ರವನ್ನು ವೆಂಕಟ್ ಎನ್ನುವವರು ನಿರ್ಮಿಸಿದ್ದು, ವೆಂಕಟ್ ಸ್ನೇಹಿತರಾದ ಮಾಜಿ ಪೊಲೀಸ್ ಅಧಿಕಾರಿ, ನ್ಯಾಯಾಧೀಶರೊಬ್ಬರು ಹಾಗೂ ನಿರ್ಮಾಪಕ ಭಾಮಾ ಹರೀಶ್ ಆಡಿಯೋವನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. 'ಸಿದ್ಲಿಂಗು' ಹಾಗೂ 'ನೀರ್ ದೋಸೆ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಸುಮನ್ ರಂಗನಾಥ್ ಬೀಡಿ ಸೇದುತ್ತಾ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಪೋಸ್ಟರ್ ಕೆಲವು ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು.
![suman](https://etvbharatimages.akamaized.net/etvbharat/prod-images/4789177_115_4789177_1571397171625.png)
ಸುಮನ್ ರಂಗನಾಥ್ ಜೊತೆ ಸಂಜೀವ್ ಕುಮಾರ್, ಅರುಣ್, ಸೋಮು, ರಿಚ್ ಶಾಸ್ತ್ರಿ, ಮುಮೈತ್ ಖಾನ್ ಸೇರಿದಂತೆ ಇತರ ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಾಜ ವಿಕ್ರಮ ಸಂಗೀತವಿದೆ. ನಿರ್ಮಾಪಕ ವೆಂಕಟ್ ಎರಡು ಹಾಡುಗಳನ್ನು ಬರೆದು ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಕೆ.ಟಿ. ನಾಯಕ್ ನಿರ್ದೇಶನವಿದೆ. ಅಪರಿಚಿತರು ಬಂದಾಗ ಬಹಳ ಎಚ್ಚರದಿಂದ ಇರಿ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಪ್ರೇಕ್ಷಕರಿಗೆ ಯಾವ ರೀತಿ ಮೆಚ್ಚುಗೆಯಾಗಲಿದೆ ಎಂಬುದನ್ನು ಕಾದು ನೋಡಬೇಕು.