ಬೆಂಗಳೂರು: ಖ್ಯಾತ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ (69) ಅವರು ನಿಧನರಾಗಿದ್ದಾರೆ.
ಅಸ್ತಮಾ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ರಾಜಗೋಪಾಲ್ ನಿನ್ನೆ ತಡರಾತ್ರಿ 1 ಗಂಟೆಗೆ ಅವರ ಮನೆಯಲ್ಲೆ ಕೊನೆಯುಸಿರೆಳೆದಿದ್ದಾರೆ. ಅವರು ಕೆಂಗೇರಿ ಬಳಿಯ ವಲಗರ ಹಳ್ಳಿಯಲ್ಲಿನ ಬಿಡಿಎ ವಸತಿ ಸಮುಚ್ಚಯದಲ್ಲಿ ವಾಸವಿದ್ದರು.
ರಾಜಗೋಪಾಲ್ ಅವರು ಕನ್ನಡ, ತಮಿಳು ಸೇರಿದಂತೆ 650ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಪ್ರಸಿದ್ಧ ಆರ್ಕೆಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡುತ್ತಿದ್ದ ಇವರು ಮಿಮಿಕ್ರಿ ರಾಜಗೋಪಾಲ್ ಎಂದೇ ಹೆಸರುವಾಸಿಯಾಗಿದ್ದರು. ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಹೀಗೆ ಕನ್ನಡ ದೊಡ್ಡ ನಟರ ಜೊತೆ ಅಭಿನಯಿಸಿರುವ ರಾಜಗೋಪಾಲ್, ನಿರ್ದೇಶಕ ಸಾಯಿ ಪ್ರಕಾಶ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ.
ಕೆಲ ವರ್ಷಗಳ ಹಿಂದಿನಿಂದ ಸಿನಿಮಾ ಅವಕಾಶ ಇಲ್ಲದೇ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದ ರಾಜ ಗೋಪಾಲ್ ಅವರು, ತಮ್ಮಂತ ಹಿರಿಯ ಕಲಾವಿದರಿಗೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಸಾಕಷ್ಟು ಬಾರಿ ನೋವು ತೋಡಿಕೊಡಿದ್ದರು. ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದು, ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ.