ರವಿ ಶ್ರೀವತ್ಸ ನಿರ್ದೇಶನದ 'ಎಂಆರ್' ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈಗಾಗಲೇ ಸಿನಿಮಾ ಮುಹೂರ್ತವಾಗಿದ್ದು ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಚಿತ್ರವನ್ನು ಮುಂದುವರೆಸಬೇಡಿ ಎಂದು ಮತ್ತೊಬ್ಬ ನಿರ್ಮಾಪಕ ಮತ್ತು ಮುತ್ತಪ್ಪ ರೈ ಬಲಗೈ ಬಂಟರಾಗಿದ್ದ ಪದ್ಮನಾಭ್ ಹೇಳಿದ್ದಾರೆ. ಬಹಳ ದಿನಗಳಿಂದ ಮುತ್ತಪ್ಪ ರೈ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ರವಿ ಶ್ರೀವತ್ಸ ಅವರಿಗೆ ನಿರಾಸೆಯಾಗಿದೆ.
ಮುತ್ತಪ್ಪ ರೈ ಕುರಿತು ಚಿತ್ರ ನಿರ್ಮಾಣವಾಗುತ್ತಿರುವ ಬಗ್ಗೆ ಕಳೆದ ಒಂದು ತಿಂಗಳನಿಂದ ಸಾಕಷ್ಟು ಚರ್ಚೆಯಾಗುತ್ತಿದೆ. ಇದಕ್ಕೂ ಮೊದಲು ರಾಮನಗರದಲ್ಲಿ ಗ್ರ್ಯಾಂಡ್ ಆಗಿ ಫೋಟೋಶೂಟ್ ಕೂಡಾ ಆಗಿತ್ತು. ಆ ನಂತರ ಚಿತ್ರದ ಮುಹೂರ್ತ ನೆರವೇರಿತ್ತು. ಇಷ್ಟೆಲ್ಲಾ ಆಗುವಾಗ ಸುಮ್ಮನಿದ್ದ ಪದ್ಮನಾಭ್, ಚಿತ್ರೀಕರಣ ಪ್ರಾರಂಭವಾಗುವ ಹೊತ್ತಿನಲ್ಲಿ ಚಿತ್ರವನ್ನು ನಿಲ್ಲಿಸಲು ಹೇಳುತ್ತಿದ್ದಾರೆ. ಈ ಮೊದಲೇ ಅವರು ಏಕೆ ಈ ವಿಷಯವಾಗಿ ವಿರೋಧಿಸಲಿಲ್ಲ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದಾರೆ. "ನಾನು ಊರಿನಲ್ಲಿ ಇರಲಿಲ್ಲ. ರವಿ ಶ್ರೀವತ್ಸ ಈ ಸಿನಿಮಾ ಮಾಡುತ್ತಿರುವುದು ನನಗೆ ಗೊತ್ತಿರಲಿಲ್ಲ. ವಾಪಸ್ ಬಂದಾಗಷ್ಟೇ ತಿಳಿಯಿತು. ತಕ್ಷಣ ಆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರನ್ನು ಕರೆಸಿ ಚಿತ್ರವನ್ನು ನಿಲ್ಲಿಸಲು ಹೇಳಿದ್ದೇನೆ. ಮುತ್ತಪ್ಪ ರೈ ಅವರ ಬಗ್ಗೆ ಸಿನಿಮಾ ಮಾಡಬೇಕೆಂದರೆ, ಅವರ ಕುಟುಂಬದವರ ಅನುಮತಿ ಪಡೆಯಬೇಕಿದೆ. ಯಾವುದೇ ಅನುಮತಿ ಇಲ್ಲದೆ ಚಿತ್ರ ಮಾಡುವುದಕ್ಕೆ ಹೇಗೆ ಸಾಧ್ಯ...? ನಾಳೆ ಇದರಿಂದ ಸಮಸ್ಯೆ ಎದುರಾಗಬಹುದು. ಹಾಗಾಗಿ ಚಿತ್ರೀಕರಣ ಪ್ರಾರಂಭವಾಗಿಲ್ಲದಿರುವುದರಿಂದ ಈಗಲೇ ಚಿತ್ರವನ್ನು ನಿಲ್ಲಿಸುವುದಕ್ಕೆ ಹೇಳಿದ್ದೇನೆ" ಎನ್ನುತ್ತಾರೆ ಪದ್ಮನಾಭ್.
![Producer Padmanabh about MR movie](https://etvbharatimages.akamaized.net/etvbharat/prod-images/img-20201221-wa00031608520394692-64_2112email_1608520405_1042.jpg)
ಇದನ್ನೂ ಓದಿ: ಗರ್ಭಿಣಿಯರಿಗೆ ಬೈಬಲ್ ಬರೆಯಲಿದ್ದಾರೆ ಕರೀನಾ ಕಪೂರ್!
ಕಾನೂನು ತಜ್ಞರ ಕುರಿತು ಚರ್ಚೆ ಮಾಡಿಯೇ ನಂತರ ಚಿತ್ರ ಪ್ರಾರಂಭಿಸುವುದಾಗಿ ಮುಹೂರ್ತದ ದಿನ ನಿರ್ದೇಶಕ ರವಿ ಶ್ರೀವತ್ಸ ಹೇಳಿಕೊಂಡಿದ್ದರು. ಮುಂದೊಂದು ದಿನ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವರನ್ನು ಸಂಪರ್ಕಿಸಿ, ರೈ ಕುರಿತು ಚಿತ್ರ ಮಾಡಿದಲ್ಲಿ ಏನಾದರೂ ಸಮಸ್ಯೆಯಾಗಬಹುದಾ ಎಂದು ಚರ್ಚಿಸಿ, ಅನುಮಾನ ಬಗೆಹರಿಸಿಕೊಂಡ ನಂತರವಷ್ಟೇ ಚಿತ್ರ ಪ್ರಾರಂಭಿಸಿದ್ದಾಗಿ ಹೇಳಿಕೊಂಡಿದ್ದರು. ಹೀಗಿರುವಾಗ, ಚಿತ್ರೀಕರಣ ಪ್ರಾರಂಭವಾಗುವ ಮುಂಚೆಯೇ ಚಿತ್ರವನ್ನು ನಿಲ್ಲಿಸುವುದಕ್ಕೆ ಮುತ್ತಪ್ಪ ರೈ ಅವರ ಆಪ್ತ ಪದ್ಮನಾಭ್ ಸೂಚಿಸಿದ್ದಾರೆ. ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟಲಿದೆಯೋ ಕಾದು ನೋಡಬೇಕು.
![Producer Padmanabh about MR movie](https://etvbharatimages.akamaized.net/etvbharat/prod-images/9950564_padma.jpg)