ಕನ್ನಡ ಸಿನಿಮಾಗಳಿಗೆ ಹಾಡುಗಳ ಸಾಲುಗಳನ್ನು ಶೀರ್ಷಿಕೆ ಆಗಿ ಬಳಸಿರುವ ಬೇಕಾದಷ್ಟು ಉದಾಹರಣೆಗಳಿವೆ. 1993 ರಲ್ಲಿ ಬಿಡುಗಡೆಯಾದ ಹಾರರ್-ಥ್ರಿಲ್ಲರ್ ಕಥಾವಸ್ತು ಉಪೇಂದ್ರ ನಿರ್ದೇಶನದ 'ಶ್' ಸಿನಿಮಾದ ಹಾಡಿನ ಸಾಲೊಂದು ಇದೀಗ ಸಿನಿಮಾವಾಗಿ ಬರುತ್ತಿದೆ.
ಸಾಧು ಕೋಕಿಲ ಸಂಗೀತ ನಿರ್ದೇಶನದಲ್ಲಿ ಎಲ್.ಎನ್. ಶಾಸ್ತ್ರಿ ಹಾಡಿರುವ ಅವನಲ್ಲಿ..ಇವಳಿಲ್ಲಿ..ಮಾತಿಲ್ಲ..ಕಥೆಯಿಲ್ಲ..ಎಂಬ ಹಾಡಿನಿಂದ 'ಅವನಲ್ಲಿ ಇವಳಿಲ್ಲಿ' ಎಂಬ ಶೀರ್ಷಿಕೆ ಆಯ್ದುಕೊಂಡ ಸಿನಿಮಾ ತಂಡ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದೆ. ಬೆಂಗಳೂರು, ಶ್ರೀರಂಗಪಟ್ಟಣ, ಮೇಲುಕೋಟೆ ಬಳಿಯ ಕೆರೆತಣ್ಣೂರು, ಪಾಂಡವಪುರ, ಮೈಸೂರು ಹಾಗೂ ಸಕಲೇಶಪುರ ಸುತ್ತ ಮುತ್ತ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ.
ಇದೊಂದು ದುರಂತ ಪ್ರೇಮಕಥೆ ಸಿನಿಮಾ. ಪ್ರತಿಷ್ಠೆಗಾಗಿ ಮಗಳು ಸತ್ತುಹೋದಳು ಎಂದು ಸುಳ್ಳು ಹೇಳುವ ರಾಜಕೀಯ ವ್ಯಕ್ತಿ ಮಗಳನ್ನು ಪ್ರೇಮಿಯಿಂದ ದೂರ ಮಾಡಲು ಪ್ರಯತ್ನಿಸುತ್ತಾನೆ. ನಂತರ ಏನು ನಡೆಯಲಿದೆ ಎಂಬುದು ಸಿನಿಮಾ ಕಥೆ. ಪ್ರಭು ಮುಂಡ್ಕರ್ ವನ್ಯಜೀವಿ ಛಾಯಾಗ್ರಹಕ ಆಗಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ರಾಜಕೀಯ ವ್ಯಕ್ತಿಯ ಪುತ್ರಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ಚಿತ್ರದ ಮತ್ತೊಬ್ಬ ನಾಯಕ ಲಕ್ಷ್ಮಿನಾರಾಯಣರಾಜ ಅರಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
![Avanalli ivalilli in Post production work](https://etvbharatimages.akamaized.net/etvbharat/prod-images/dir-sandeshkrishnamurthy1597285149824-56_1308email_1597285160_712.jpg)
ಡಾ. ಜಾಹ್ನವಿ ಜ್ಯೋತಿ, ಜೈ ಜಗದೀಶ್, ಹನುಮಂತೇ ಗೌಡ, ಹರಹರ ಮಹಾದೇವ ಖ್ಯಾತಿಯ ವಿನಯ್ ಗೌಡ , ಸುಚಿತ್ರಾ, ಸಂಗೀತ, ಶ್ರೀನಿವಾಸ ಮೇಷ್ಟ್ರು, ವೀಣಾ ಪೊನ್ನಪ್ಪ ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. 14 ವರ್ಷಗಳಿಂದ ಕಿರುತೆರೆಯಲ್ಲಿ ಸಂಕಲನಾಕಾರರಾಗಿ ಕೆಲಸ ಮಾಡುತ್ತಿರುವ ತೀರ್ಥಹಳ್ಳಿ ಸಂದೇಶ್ ಕೃಷ್ಣಮೂರ್ತಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಂಕಲನ ಜೊತೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಕೆ. ಕಲ್ಯಾಣ್ ಮತ್ತು ಘೌಸ್ಪೀರ್ ಬರೆದ ನಾಲ್ಕು ಹಾಡುಗಳಿಗೆ ರೋಣದ ಬಕ್ಕೇಶ್ ಹಾಗೂ ಕಾರ್ತಿ ಚೆನ್ನೋರಾಜ್ ರಾಗ ಸಂಯೋಜನೆ ಮಾಡಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ, ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಎಲ್ಎನ್ಆರ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರ ಶೀಘ್ರವೇ ಬಿಡುಗಡೆಯಾಗಲಿದೆ.