'ಬೆಳೆಯುವ ಸಿರಿ ಮೊಳಕೆಯಲ್ಲಿ' ಎನ್ನುವ ಹಾಗೆ ರಾಷ್ಟ್ರ ಪ್ರಶಸ್ತಿ ವಿಜೇತೆ, ಹಿರಿಯ ನಟಿ ತಾರಾ ಹಾಗೂ ಪ್ರಸಿದ್ಧ ಛಾಯಾಗ್ರಾಹಕ ಹೆಚ್.ಸಿ. ವೇಣು ಅವರ ಪುತ್ರ ಮಾಸ್ಟರ್ ಶ್ರೀಕೃಷ್ಣ ಎಲ್ಲಾ ಕಡೆಯಿಂದ ಪ್ರಶಂಸೆ ಪಡೆಯುತ್ತಿದ್ದಾರೆ. ಅದಕ್ಕೆ ಕಾರಣ ಗುರುವಾರ ಬಿಡುಗಡೆ ಆದ ‘ಶಿವಾರ್ಜುನ’ ಕನ್ನಡ ಸಿನಿಮಾದಲ್ಲಿ ಮಾಸ್ಟರ್ ಶ್ರೀ ಕೃಷ್ಣ ಚುರುಕಾದ ಅಭಿನಯ.
ವಿಶೇಷ ಎಂದರೆ ಶ್ರೀಕೃಷ್ಣ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಕೂಡಾ ಮಾಡಿದ್ದಾರೆ. 'ಶಿವಾರ್ಜುನ' ಶ್ರೀ ಕೃಷ್ಣ ಅಭಿನಯದ ಮೊದಲ ಸಿನಿಮಾ ಕೂಡಾ. ಚೋಟುದ್ದ ಹುಡುಗ ಮೊದಲ ಸಿನಿಮಾದಲ್ಲಿ ಸಲೀಸಾಗಿ ಅಭಿನಯಿಸಿರುವುದರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಶ್ರೀಕೃಷ್ಣ ಆಡಿರುವ ಮುದ್ದು ಮುದ್ದಾದ ಮಾತುಗಳಿಗೆ ತಂದೆ-ತಾಯಿಗಳಾದ ತಾರಾ ಹಾಗೂ ವೇಣು ಸಂತೋಷ ವ್ಯಕ್ತಪಡಿಸಿದ್ದಾರೆ. ಧ್ರುವಾ ಸರ್ಜಾ ಅಭಿನಯದ ‘ಬಹದ್ದೂರ್’ ಚಿತ್ರಕ್ಕೆ ಶ್ರೀಕೃಷ್ಣ ಅವರಿಗೆ ಅಭಿನಯಿಸಲು ಆಹ್ವಾನ ಬಂದಿತ್ತು. ಆದರೆ ತಾರಾ ಹಾಗೂ ವೇಣು ಇನ್ನೂ ಸ್ವಲ್ಪ ದಿನಗಳು ಕಳೆಯಲಿ ಎಂದು ಸುಮ್ಮನಾಗಿದ್ದರು. ಆದರೆ ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಚಿತ್ರದಲ್ಲಿ ನಟಿಸಲು ಒತ್ತಡ ಹೆಚ್ಚಾಗಿದ್ದರಿಂದ ತಾರಾ ದಂಪತಿ ಒಪ್ಪಿಗೆ ಸೂಚಿಸಿದ್ದಾರೆ. ‘ಶಿವಾರ್ಜುನ’ ಚಿತ್ರದಲ್ಲಿ ಶ್ರೀಕೃಷ್ಣ, ಚಿರಂಜೀವಿ ಸರ್ಜಾ ಬಾಲ್ಯದ ಪಾತ್ರದಲ್ಲಿ ನಟಿಸಿದ್ದಾರೆ. ತಾರಾ ಈ ಚಿತ್ರದಲ್ಲಿ ಕೂಡಾ ಮಗನಿಗೆ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.