'ಗೀತ ಗೋವಿಂದಂ' ಸಕ್ಸಸ್ ಜೋಡಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ನಟಿಸಿರುವ 'ಡಿಯರ್ ಕಾಮ್ರೇಡ್' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಭರತ್ ಕಮ್ಮ ನಿರ್ದೇಶನದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಯುವಜನರನ್ನು ಈ ಸಿನಿಮಾ ಥಿಯೇಟರ್ಗಳತ್ತ ಸೆಳೆಯುತ್ತಿದೆ. ಇನ್ನು ಸಿನಿಮಾ ಥಿಯೇಟರ್ಗೆ ಲಗ್ಗೆ ಇಡುವ ಮುನ್ನವೇ ಮತ್ತೊಂದು ಬಂಪರ್ ಆಫರ್ ಪಡೆದಿದೆ. ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗಲಿದೆ ಎಂಬ ವಿಷಯವನ್ನು ಬಾಲಿವುಡ್ ಚಿತ್ರ ನಿರ್ಮಾಪಕ ಕರಣ್ ಜೋಹರ್ ತಮ್ಮ ಟ್ವಿಟ್ಟರ್ ಮೂಲಕ ಹೇಳಿದ್ದಾರೆ. ಚಿತ್ರಪ್ರಚಾರಕ್ಕಾಗಿ 'ಡಿಯರ್ ಕಾಮ್ರೇಡ್' ಚಿತ್ರತಂಡ ಇತ್ತೀಚೆಗೆ ಮುಂಬೈಗೆ ತೆರಳಿದೆ. ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಜಯ್ ಅಭಿಮಾನಿಗಳಿಗೆ ಈ ರೀಮೇಕ್ ವಿಷಯ ಹೇಳಿ ಸರ್ಪ್ರೈಸ್ ನೀಡಿದ್ದಾರೆ. ಹಿಂದಿಗೆ ರೀಮೇಕ್ ಆಗುತ್ತಿರುವ ವಿಜಯ್ ಸಿನಿಮಾಗಳಲ್ಲಿ ಇದು ಎರಡನೆಯದು. ಈ ಮುನ್ನ 'ಅರ್ಜುನ್ ರೆಡ್ಡಿ' ಕೂಡಾ 'ಕಬೀರ್ ಸಿಂಗ್' ಹೆಸರಿನಲ್ಲಿ ರೀಮೇಕ್ ಆಗಿತ್ತು.
ಇನ್ನು 'ಡಿಯರ್ ಕಾಮ್ರೇಡ್' ಸಿನಿಮಾ ಕರಣ್ ಜೋಹರ್ ಮನಗೆದ್ದಿದ್ದು ಅವರ ಸ್ವಂತ ಬ್ಯಾನರ್ 'ಧರ್ಮ ಪ್ರೊಡಕ್ಷನ್ಸ್' ಅಡಿಯಲ್ಲಿ ಹಿಂದಿಗೆ ರೀಮೇಕ್ ಆಗುತ್ತಿದೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆ್ಯಕ್ಟಿಂಗ್ ಹೊಗಳಿರುವ ಕರಣ್ ಚಿತ್ರದ ಸಂಗೀತವನ್ನು ಕೂಡಾ ಮೆಚ್ಚಿಕೊಂಡು ಚಿತ್ರತಂಡಕ್ಕೆ ಗುಡ್ಲಕ್ ಹೇಳಿದ್ದಾರೆ.