ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ 'ಸೈ ರಾ ನರಸಿಂಹರೆಡ್ಡಿ' ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದೀಗ ಚಿರು ತಮ್ಮ 152ನೇ ಸಿನಿಮಾಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ಈ ಸಿನಿಮಾಗಾಗಿ ಚಿರಂಜೀವಿ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಪರ್ಸನಲ್ ಫಿಟ್ನೆಸ್ ಟ್ರೈನರನ್ನು ಚಿರು ಬಳಿ ಕಳಿಸಿಕೊಟ್ಟಿದ್ದಾರೆ. ಚಿತ್ರದ ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾಗೆ ನಾಯಕಿಯಾಗಿ ಐಶ್ವರ್ಯ ರೈ ಅವರನ್ನು ಕರೆತರಲಿದ್ದಾರೆ ಎನ್ನುತ್ತಿದ್ದಾರೆ ಟಾಲಿವುಡ್ ಪಂಡಿತರು. ಈ ಮೊದಲು ನಯನತಾರ ಹೆಸರು ಕೇಳಿಬಂದಿತ್ತಾದರೂ ಇದೀಗ ಐಶ್ ಬೇಬಿ ಹೆಸರು ಫಿಲ್ಮ್ ನಗರದಲ್ಲಿ ಹರಿದಾಡುತ್ತಿದೆ.
ಚಿರಂಜೀವಿ ಜೊತೆ ಬಹುತೇಕ ಎಲ್ಲಾ ನಟಿಯರು ನಟಿಸಿದ್ದಾರೆ. ಈಗಾಗಲೇ 'ಸೈ ರಾ ನರಸಿಂಹರೆಡ್ಡಿ' ಚಿತ್ರದಲ್ಲಿ ನಯನತಾರ ಚಿರು ಜೊತೆ ನಟಿಸಿದ್ದಾರೆ. ಇದುವರೆಗೂ ಚಿರು ಜೊತೆ ನಟಿಸದ ಹಿರೋಯಿನ್ ಈ ಹೊಸ ಸಿನಿಮಾದಲ್ಲಿ ನಟಿಸಿದರೆ ಚಿತ್ರಕ್ಕೆ ಫ್ರೆಶ್ಲುಕ್ ಬರಲಿದೆ ಎಂಬುದು ಚಿತ್ರತಂಡದ ಲೆಕ್ಕಾಚಾರ. ಶೀಘ್ರದಲ್ಲೆ ಚಿರು ನಾಯಕಿ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ. ಸಿನಿಮಾಗಾಗಿ ಈಗಾಗಲೇ ಸೆಟ್ ಕೂಡಾ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಚಿತ್ರದಲ್ಲಿ ಚಿರಂಜೀವಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದಾರೆ. ಚಿತ್ರವನ್ನು ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್ಚರಣ್ ತೇಜ ನಿರ್ಮಿಸುತ್ತಿದ್ದಾರೆ.