ಕಳೆದ ಎರಡು ವರ್ಷಗಳಿಂದ ನಟಿ ಜಯಶ್ರೀ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಈಗಾಗಲೇ ಅನೇಕ ಭಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು ಎನ್ನಲಾಗುತ್ತಿದೆ. ಆದರೆ, ಆಕೆ ಖಿನ್ನತೆಗೆ ಒಳಗಾಗಲು ಕಾರಣವಾದರೂ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಮಧ್ಯೆ ಜಯಶ್ರೀ ಬಗ್ಗೆ ನಿರ್ದೇಶಕಿ ಮತ್ತು ಲೇಖಕಿ ರೇಖಾರಾಣಿ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಬರೆದುಕೊಂಡಿದ್ದಾರೆ.
'ಹೋಗಿದ್ದೀಯ, ಮತ್ತೆಂದೂ ಬರಬೇಡ ಮಗಳೆ. ಜಯಶ್ರೀ ರಾಮಯ್ಯ, ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು. ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ' ಎಂದು ಹೇಳಿದ್ದಾರೆ.
ಬಣ್ಣದ ಲೋಕದಿಂದ ಆಫರ್ಗಳು ಬರುವುದೇ ನಿಂತು ಹೋಗಿತ್ತಂತೆ. ಜೀವನ ನಡೆಸಲು ಕಷ್ಟವಾಗಿ ಖಾಸಗಿ ಕಂಪನಿಗಳಲ್ಲಿ ಕೆಲಸ ಇದ್ದರೆ, ಹೇಳುವಂತೆ ಸ್ನೇಹಿತರ ಬಳಿ ಆಗಾಗ ಕೇಳುತ್ತಿದ್ದರು ಎಂದೂ ಹೇಳಲಾಗುತ್ತಿದೆ. ಖಿನ್ನತೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ ಜಯಶ್ರೀ, ಮತ್ತೆ ಡ್ಯಾನ್ಸ್ ಕ್ಲಾಸ್ಗೆ ಸೇರಿಕೊಂಡಿದ್ದರಂತೆ. ಜೊತೆಗೆ ಸೈಕ್ಲಿಂಗ್ ಸಹ ಮಾಡಲಾರಂಭಿಸಿ, ಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನದಲ್ಲಿದ್ದರಂತೆ. ಕಳೆದ ಒಂದು ತಿಂಗಳ ಹಿಂದೆ ವೃದ್ಧಾಶ್ರಮಕ್ಕೆ ಜಯಶ್ರೀ ಮಾವ ಸೇರಿಸಿದ್ದರಂತೆ.