ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಅಭಿನಯದ ಮೂಲಕ ಖ್ಯಾತಿ ಪಡೆದಿರುವ ನಟ ಸತೀಶ್ ನೀನಾಸಂ ಪೆಟ್ರೋಮ್ಯಾಕ್ಸ್,ಮ್ಯಾಟ್ನಿ, ಗೋದ್ರಾ ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸತೀಶ್ ವಿಡಿಯೋ ಆಲ್ಬಂ ಸಾಂಗ್ ಮಾಡಿದ್ದು,ಅಶರೀರವಾಣಿ ಎಂದು ಹೆಸರಿಟ್ಟಿದ್ದಾರೆ.
ಮೊದಲ ಬಾರಿಗೆ ಸತೀಶ್ ನೀನಾಸಂ ಹಾಡನ್ನು ಬರೆದಿದ್ದು, ಸ್ವತಃ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಲವು ತಿಂಗಳ ಹಿಂದೆ ಸತೀಶ್ ಮಗಳ ಹೆಸರನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಇದೀಗ ಮಗಳ ಜೊತೆ ಆಲ್ಬಂ ವಿಡಿಯೋ ಶೂಟ್ ಮಾಡಿದ್ದು, ಮೊದಲ ಬಾರಿಗೆ ಪುತ್ರಿ ಮನಸ್ವಿತಾ ನಟಿಸಿದ್ದಾರೆ.
ಈ ಆಲ್ಬಂ ಹಾಡು ಸತೀಶ್ ನೀನಾಸಂ ಮಗಳ ಪರಿಚಯದ ಹಾಡಲ್ಲ. ಕಳೆದೆರಡು ವರ್ಷದಿಂದ ಇಡೀ ವಿಶ್ವವನ್ನು ಕಾಡಿದ ಕೊರೊನಾ ಬಗೆಗಿನ ಹಾಡಾಗಿದೆ. ಕೋವಿಡ್ನ 2ನೇ ಅಲೆಯಲ್ಲಿ ಜನರು ಅನುಭವಿಸಿದ ಸ್ಥಿತಿಗತಿಗಳನ್ನು ಒಳಗೊಂಡಂತೆ ಹಾಡನ್ನು ಬರೆದಿದ್ದಾರೆ.
ಇದಕ್ಕೆ ಸ್ವತಃ ಅವರೇ ಧ್ವನಿ ನೀಡಿ ಸಂಯೋಜನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹಾಡನ್ನು ಚಿತ್ರೀಕರಣ ಮಾಡಿದ್ದು, ಕ್ಯಾಮೆರಾಮ್ಯಾನ್ ಸಂದೀಪ್ ಕುಮಾರ್ ಬಹಳ ಚೆನ್ನಾಗಿ ಚಿತ್ರೀಸಿದ್ದಾರೆ.
ನನ್ನ ಮಗಳಿಗೆ ನಿರ್ದೇಶನ ಮಾಡಿದ್ದು ಬೇರೆ ರೀತಿಯ ಅನುಭವ ನೀಡಿತು. ಮನಸ್ವಿತಾಗೆ ನಟನೆ, ಡಾನ್ಸ್ ಸೇರಿದಂತೆ ಹಲವು ವಿಷಯಗಳಲ್ಲಿ ತುಂಬಾ ಆಸಕ್ತಿ. ಕ್ಯಾಮೆರಾಗೆ ತಕ್ಕಂತೆ ನಟನೆ ಮಾಡಿದ್ದಾಳೆ.
ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕರೆದುಕೊಂಡು ಹೋದಾಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಬಹಳ ಚೆನ್ನಾಗಿ ನಟಿಸಿದ್ದಾಳೆ ಎಂದು ಪುತ್ರಿಯ ನಟನೆ ಬಗ್ಗೆ ಸತೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೆಲುಗು ಸಿನಿಮಾ ಮಧ್ಯೆ ಹೊಸ ಸಿನಿಮಾದ ಸುಳಿವು ನೀಡಿದ ದುನಿಯಾ ವಿಜಯ್