ಕೊರೊನಾ ನಂತ್ರ ಕೆಲವು ಮಾನದಂಡಗಳ ಅಡಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಸಜ್ಜಾಗುತ್ತಿದ್ದಾರೆ. ನಿರ್ದೇಶಕ ಮನ್ಸೂರ್ ಆಕ್ಷನ್ ಕಟ್ ಹೇಳಿರುವ "ಆಕ್ಟ್ 1978" ನವೆಂಬರ್ 20 ರಂದು ಥಿಯೇಟರ್ಗಳಿಗೆ ಲಗ್ಗೆ ಇಡಲಿದೆ.
ಹರಿವು ಹಾಗೂ ನಾತಿಚರಾಮಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮನ್ಸೂರ್ ಮತ್ತೊಮ್ಮೆ ಮಹಿಳಾ ಕೇಂದ್ರಿತ ವಿಷಯವನ್ನಿಟ್ಟು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಚಿತ್ರಕ್ಕೆ ಮನ್ಸೂರ್ ಕಥೆ ಬರೆದು ಅವರೇ ನಿರ್ದೇಶನವನ್ನೂ ಮಾಡಿದ್ದಾರೆ.
ಈ ಸಿನಿಮಾಲ್ಲಿ 28 ಕಲಾವಿದರು ನಟಿಸಿದ್ದಾರೆ. ಯಜ್ಞ ಶೆಟ್ಟಿ, ಪ್ರಮೋದ್ ಶೆಟ್ಟಿ, ಬಿ.ಸುರೇಶ್, ಸಂಚಾರಿ ವಿಜಯ್, ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶೋಭ್ ರಾಜ್, ಶರಣ್ಯ, ನಂದಗೋಪಾಲ್, ರಾಘು ಶಿವಮೊಗ್ಗ, ಕಿರಣ್ ನಾಯಕ್ ಸೇರಿದಂತೆ ಹಲವರ ತಾರಾ ಬಳಗವಿದೆ.
ಈ ಸಿನಿಮಾ ಟ್ರೈಲರ್ನಿಂದಲೇ ನಿರೀಕ್ಷೆ ಹುಟ್ಟಿಸಿದೆ. ಯಜ್ಞ ಶೆಟ್ಟಿ ಕೈಯಲ್ಲಿ ಗನ್ ಹಿಡಿದು ಸರ್ಕಾರದ ಅಧಿಕಾರಿ ವಿರುದ್ಧ ಹೋರಾಡುವ ಮಹಿಳೆಯಾಗಿ ಕಾಣಿಸಿಕೊಂಡಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಚಿತ್ರಕ್ಕೆ ರಾಹುಲ್ ಶಿವಕುಮಾರ್ ಸಂಗೀತ ನಿರ್ದೇಶನ ಮಾಡಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ.
ಡಿ.ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ ಈ ಚಿತ್ರವ ಇದೇ ತಿಂಗಳ 20ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರವನ್ನ ನೋಡಲು ಪ್ರೇಕ್ಷಕ ಪ್ರಭುಗಳು ಚಿತ್ರಮಂದಿರಗಳ ಮುಖ ಮಾಡುತ್ತಾರಾ ಎಂಬುದು 20ರ ನಂತರ ಗೊತ್ತಾಗಲಿದೆ.