ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷ ಕೊರೊನಾ ಮಧ್ಯೆಯೂ, ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮನ ಗೆದ್ದ ಸಿನಿಮಾ 'ಆಕ್ಟ್ 1978'. ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನ ಮಾಡಿದ್ದರು.
ಸಾಮಾಜಿಕ ಕಳಕಳಿಯ ಕಥೆ ಆಧರಿಸಿರುವ 'ಆಕ್ಟ್ 1978' ಚಿತ್ರವನ್ನು ಸಿನಿ ಪ್ರೇಕ್ಷಕರಲ್ಲದೇ, ಕನ್ನಡದ ಸ್ಟಾರ್ ನಟರೂ ಕೂಡ ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಈಗ ಈ ಸಿನಿಮಾ ಕನ್ನಡದ ಗಡಿ ದಾಟಿ ಹೊರಟಿದೆ. ಅಂದರೆ ಹಿಂದಿಗೆ ರಿಮೇಕ್ ಆಗುವುದಕ್ಕೆ ಆಕ್ಟ್ 1978 ಸಜ್ಜಾಗಿದೆ.
ಈಗಾಗಲೇ ಅಧಿಕೃತವಾಗಿ ರಿಮೇಕ್ ಹಕ್ಕುಗಳು ಮಾರಾಟವಾಗಿದ್ದು, ಅತಿ ಶೀಘ್ರದಲ್ಲೇ ಹಿಂದಿ ಅವತರಣಿಕೆಯ ಶೀರ್ಷಿಕೆಯ ಅನಾವರಣವಾಗಲಿದೆ. ಆಕ್ಟ್ 1978 ಚಿತ್ರತಂಡದ ಮೂಲಗಳ ಪ್ರಕಾರ, ನಿರ್ಮಾಪಕ ದೇವರಾಜ್ ಅವರು ಹಿಂದಿಗೆ ರಿಮೇಕ್ ಹಕ್ಕನ್ನು ದೊಡ್ಡ ಮಟ್ಟದ ಹಣಕ್ಕೆ ಸೇಲ್ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಿನ್ನ ನಂಬಿದ್ದೇ ನನ್ನ ದೊಡ್ಡ ತಪ್ಪು... ಆತ್ಮಹತ್ಯೆ ಯತ್ನಕ್ಕೂ ಮುನ್ನ ಚೈತ್ರಾ ಕೊಟೂರು ಹೇಳಿದ್ದು
ಈ ಸಿನಿಮಾವನ್ನು ಹಿಂದಿಯಲ್ಲಿ, ನಿರ್ದೇಶಕ ಮಂಸೋರೆ ನಿರ್ದೇಶನ ಮಾಡ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಸಿನಿಮಾದಲ್ಲಿ ಅದ್ಭುತ ಸಂಭಾಷಣೆ ಬರೆದಿರುವ ವೀರೇಂದ್ರ ಮಲ್ಲಣ್ಣ ಹೇಳುವ ಪ್ರಕಾರ, ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿರುವ ಹಿಂದಿ ನಿರ್ಮಾಪಕರು ಮಂಸೋರೆಗೆ ನಿರ್ದೇಶನ ಮಾಡುವಂತೆ ಕೇಳಿದ್ದಾರಂತೆ. ಆದರೆ, ಈ ಬಗ್ಗೆ ಈ ತಿಂಗಳ ಕೊನೆಯಲ್ಲಿ ಒಂದು ಸಭೆ ಬಳಿಕ ಎಲ್ಲವೂ ಗೊತ್ತಾಗಲಿದೆ. ಹಿಂದಿ ಅವತರಣಿಕೆಯಲ್ಲಿ ಹೆಸರಾಂತ ನಟಿಯೊಬ್ಬರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ದೊಡ್ಡ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆಯಂತೆ.
ಆಕ್ಟ್-1978 ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಸಂಚಾರಿ ವಿಜಯ್, ಅಚ್ಯುತ್ ಕುಮಾರ್, ಅವಿನಾಶ್, ಸುಧಾ ಬೆಳವಾಡಿ, ಶ್ರುತಿ, ಶೋಭರಾಜ್, ಎಚ್.ಜಿ. ದತ್ತಾತ್ರೇಯ, ಆರ್‌ಜೆ ನೇತ್ರಾ, ಬಾಲ ರಾಜ್‌ವಾಡಿ ಸೇರಿದಂತೆ ಅನೇಕ ಅನುಭವಿ ಕಲಾವಿದರು ಕಾಣಿಸಿಕೊಂಡಿದ್ದರು.