ಕನ್ನಡ ಚಿತ್ರರಂಗ ಹಾಗೂ ಕನ್ನಡ ಕಲಾ ಅಭಿಮಾನಿಗಳ ಪಾಲಿಗೆ ವಿಶೇಷವಾದ ದಿನ ಏಪ್ರಿಲ್ 24. ಯಾಕೆಂದರೆ ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ, ಗಾನ ಗಂಧರ್ವ, ಬಂಗಾರದ ಮನುಷ್ಯ, ವರನಟ ಡಾ.ರಾಜ್ ಕುಮಾರ್ ಹುಟ್ಟಿದ ದಿನ..ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ, ಆರು ಕೋಟಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಪೂಜಿಸಲ್ಪಡುತ್ತಿದ್ದಾರೆ.
ಕನ್ನಡ ಗೊತ್ತಿಲ್ಲದವರು ಡಾ ರಾಜ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೊರಿಸುತ್ತಾರೆ. ಅಣ್ಣಾವ್ರ ಚಿತ್ರಗಳನ್ನ ನೋಡದೇ ಇರುವವರನ್ನ ನೋಡುವಂತೆ ಮಾಡುತ್ತೆ. ಇವತ್ತಿಗೂ ಕನ್ನಡ ಹಾಡುಗಳನ್ನ ಕೇಳದೇ ಇರುವವರು, ವರನಟನ ಹಾಡುಗಳನ್ನ ಕೇಳಿದ್ಮೇಲೆ ಮತ್ತೊಮ್ಮೆ ಕೇಳುವಂತೆ ಮಾಡ್ತಾರೆ. ಹೀಗೆ, ಕನ್ನಡ ಭಾಷೆ, ಕನ್ನಡ ನಾಡಿನ ರಾಯಭಾರಿಯಾಗಿರುವ ಈ ಮಹಾನ್ ನಟನ ಹುಟ್ಟುಹಬ್ಬವನ್ನ ಇಂದು ನಾಡಿನಾದ್ಯಂತ ಅಭಿಮಾನಿಗಳು ಹಬ್ಬದಂತೆ ಮಾಡುತ್ತಾರೆ. ಈ ಸರಳ ವ್ಯಕ್ತಿತ್ವದ ಮಹಾ ನಟನ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಚ್ವರಿ ವಿಷಯಗಳು ಇಲ್ಲಿವೆ.
ಕರ್ನಾಟಕ ಅಲ್ಲದೇ ಭಾರತ ದೇಶಕ್ಕೆ ಪ್ರಖ್ಯಾತರಾಗಿರುವ ರಾಜ್ ಕುಮಾರ್, ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಆದರೆ, ಮೂರನೇ ಕ್ಲಾಸ್ ಓದಿರುವ ಸಾಮಾನ್ಯ ಮನುಷ್ಯ ಕನ್ನಡ ಚಿತ್ರರಂಗದ ಐಕಾನ್ ಆಗಿರೋದು ಹೆಮ್ಮೆಯ ವಿಷ್ಯ.
ಗುಬ್ಬಿ ವೀರಣ್ಣ ನಾಟಕ ಮಂಡಳಿಯಲ್ಲಿ ನಾಟಕ ಮಾಡುತ್ತಿದ್ದ ಅಣ್ಣಾವ್ರು ಅಭಿನಯಿಸಿದ ಮೊಟ್ಟ ಮೊದಲ ಚಿತ್ರ ಬೇಡರ ಕಣ್ಣಪ್ಪ. 1954ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಡಾ ರಾಜ್ ಕುಮಾರ್ ಬೇಡರ ಪಾತ್ರದಲ್ಲಿ ಮನೋಜ್ಞ ಅಭಿನಯ ತೋರಿದ್ದರು. ಆಶ್ಚರ್ಯದ ಸಂಗತಿ ಅಂದ್ರೆ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಕನ್ನಡ ಚಿತ್ರರಂಗವನ್ನ ಸುಮಾರು 5 ದಶಕಗಳ ಕಾಲ ಚಿತ್ರರಂಗದಲ್ಲಿ ನಟಿಸಿದವರು ಡಾ ರಾಜ್ ಕುಮಾರ್. ಆಡು ಮುಟ್ಟದ ಸೊಪ್ಪಿಲ್ಲ, ರಾಜ್ ಕುಮಾರ್ ಮಾಡಿರದ ಪಾತ್ರಗಳಿಲ್ಲ. ಆದರೆ ಡಾ ರಾಜ್ ಕುಮಾರ್ ಸ್ಟಾರ್ ವ್ಯಾಲ್ಯೂ ನೋಡಿ, ಹಿಂದಿ, ತೆಲುಗು, ತಮಿಳು ಹಾಗು ಮಲೆಯಾಳಂ ಭಾಷೆ ಚಿತ್ರರಂಗದ ಅಭಿನಯಿಸೋಕ್ಕೆ, ಅವಕಾಶಗಳು ಹುಡುಕಿಕೊಂಡು ಬಂದರೂ, ಯಾವುದೇ ಪರಭಾಷೆ ಚಿತ್ರಗಳಲ್ಲಿ ನಟಿಸಿದೇ ಕನ್ನಡದಲ್ಲಿ ಮಾತ್ರ ನಟಿಸಿದ ಏಕೈಕ ನಟ ಡಾ ರಾಜ್ ಕುಮಾರ್ ಅನ್ನೋದು ನಮ್ಮೆಲ್ಲರ ಹೆಮ್ಮೆ. ಆದರೆ ಇವರು ಅಭಿನಯಿಸಿರೋ ಚಿತ್ರಗಳು ಬೇರೆ ಭಾಷೆಗೆ ರಿಮೇಕ್ ಆಗಿವೆ.
ರಾಜ್ ಕುಮಾರ್, ಕೇವಲ ನಟನಾಗಿ ಯಶಸ್ಸು ಕಾಣಲಿಲ್ಲ, ಗಾಯಕರಾಗಿ, ತಾನೊಬ್ಬ ಗಾನ ಗಂಧರ್ವ ಅಂತಾ ಫ್ರೂವ್ ಮಾಡಿದರು. ಅಣ್ಣಾವ್ರ ಸಿನಿಮಾ ಹಾಡುಗಳ ಜೊತೆ, ಭಕ್ತಿ ಗೀತೆಗಳು, ದಾಸರ ಪದಗಳನ್ನ ಹಾಡಿರುವ ಖ್ಯಾತಿ ಅವರದ್ದು. ಜೀವನ ಚೈತ್ರ ಸಿನಿಮಾದ ನಾದಮಯ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಏಕೈಕ ಕನ್ನಡ ನಟ ರಾಜ್ ಕುಮಾರ್ ಅನ್ನೋದು ಅಚ್ಚರಿಯ ಸಂಗತಿ. 1992ರಲ್ಲಿ ನಾದಮಯ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬಂತು.
ಕನ್ನಡ ಚಿತ್ರರಂಗದ ದಾಖಲೆಗಳ ಪ್ರಕಾರ, ಕನ್ನಡದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ ಬಂಗಾರದ ಮನುಷ್ಯ. 1972ರಲ್ಲಿ ತೆರೆಕಂಡಿದ್ದ, ಈ ಸಿನಿಮಾ ಬರೋಬ್ಬರಿ 2 ವರ್ಷಗಳ ಕಾಲ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮೂಲಕ ದಾಖಲೆ ಬರೆದಿತ್ತು. ಹಾಗೇ ಸುಮಾರು 5 ಸೆಂಟರ್ಗಳಲ್ಲಿ ಒಂದು ವರ್ಷ ಪ್ರದರ್ಶನ ಆಗುವ ಮೂಲಕ ಸಾರ್ವಕಾಲಿಕ ದಾಖಲೆ ಮಾಡಿತ್ತು.
ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಭಾರಿಗೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪುರಸ್ಕೃತರಾದ ನಟ ಡಾ ರಾಜ್ ಕುಮಾರ್. ಚಿತ್ರರಂಗರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಗೌರವ ಇದಾಗಿದ್ದು, 1995ರಲ್ಲಿ ಅಣ್ಣಾವ್ರು ಸ್ವೀಕರಿಸಿದ್ರು.
ಇದು ಅಷ್ಟೇ ಅಲ್ಲಾ, ದಕ್ಷಿಣ ಚಿತ್ರರಂಗದಲ್ಲಿ ಅತೀ ಹೆಚ್ಚು ಬಿರುದುಗಳಿಂದ ಕರೆಯುವ ಏಕೈಕ ನಟ ಡಾ ರಾಜ್ ಕುಮಾರ್. ನಟ ಸಾರ್ವಭೌಮ, ಕರ್ನಾಟಕ ರತ್ನ, ರಸಿಕರ ರಾಜ, ಗಾನ ಗಂಧರ್ವ, ಬಂಗಾರದ ಮನುಷ್ಯ, ಕನ್ನಡಿಗರ ಕಣ್ಮಣಿ, ಕನ್ನಡಿಗರ ಆರಾಧ್ಯ ದೈವ, ವರನಟ ಹೀಗೆ ಇನ್ನು ಹಲವು ಬಿರುದುಗಳಿಂದ ಅಣ್ಣಾವ್ರನ್ನ ಅಭಿಮಾನಿ ದೇವರುಗಳು ಕರೆಯುತ್ತಾರೆ. ಈ ದಾಖಲೆಗಳ ಪ್ರಕಾರ ರಾಜ್ ಕುಮಾರ್ ಅವರಿಗೆ, ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಸುಮಾರು 15ಕ್ಕಿಂತ ಹೆಚ್ಚು ಬಿರುದು ನೀಡಿ ಗೌರವಿಸಿದೆ.
ಕನ್ನಡ ಚಿತ್ರರಂಗದ ಶಕ್ತಿಯಾಗಿ ಇವತ್ತಿಗೂ ಕೋಟ್ಯಂತರ ಅಭಿಮಾನಿಗಳಿಗೆ ಹಾಗೂ ಕನ್ನಡ ಸಂಘಟನೆಗಳಿಗೆ ಸ್ಫೂರ್ತಿಯಾಗಿರುವ ಅಣ್ಣಾವ್ರು, ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತ, ದೇಶ-ವಿದೇಶಗಳಲ್ಲೂ ಡಾ ರಾಜ್ ಕುಮಾರ್ ಅವರ ಹೆಸರಲ್ಲಿ ಅಭಿಮಾನಿ ಸಂಘಟನೆಗಳಿವೆ. ದಾಖಲೆಗಳ ಪ್ರಕಾರ ಜಗತ್ತಿನಾದ್ಯಂತ ಸುಮಾರು 10 ಸಾವಿರಕ್ಕೂ ಅಧಿಕ ರಾಜ್ ಕುಮಾರ್ ಅಭಿಮಾನಿ ಸಂಘಗಳಿವೆ ಎಂದು ಅಂದಾಜಿಸಲಾಗಿದೆ.
ಇನ್ನು 1985 ರಲ್ಲಿ ಯು.ಎಸ್ ಕೆಟಂಕಿಯ ರಾಜ್ಯಪಾಲರಿಂದ, ಕೆಟಂಕಿ ಕರ್ನಲ್ ಗೌರವಕ್ಕೆ ಪಾತ್ರರಾಗಿರುವ ಕನ್ನಡದ ಮೊಟ್ಟ ಮೊದಲ ನಟ ರಾಜ್ ಕುಮಾರ್ ಎಂಬುದು ಗಮನಾರ್ಹ.