2018 ನೇ ಸಾಲಿನ ರಾಜ್ಯ ಪ್ರಶಸ್ತಿಘೋಷಣೆಯಾಗಿದ್ದು, ದಯಾಳ್ ಪದ್ಮನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ' ಮೊದಲ ಅತ್ಯುತ್ತಮ ಚಲನಚಿತ್ರವಾಗಿ ಹೊರ ಹೊಮ್ಮಿದೆ. ಅಲ್ಲದೆ ದಯಾಳ್ ಪದ್ಮನಾಭನ್ಗೆ 'ಆ ಕರಾಳ ರಾತ್ರಿ' ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡಾ ಲಭಿಸಿದೆ.
ಇನ್ನು 'ಆ ಕರಾಳ ರಾತ್ರಿ' ಸಿನಿಮಾಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ವೀಣಾ ಸುಂದರ್ ಪಾಲಾಗಿದೆ. ಒಟ್ಟಾರೆ 2018 ನೇ ಸಾಲಿನ ರಾಜ್ಯ ಪ್ರಶಸ್ತಿಯಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಳ್ಳುವಲ್ಲಿ ಈ ಚಿತ್ರ ಯಶಸ್ವಿಯಾಗಿದ್ದು ನಿರ್ದೇಶಕ ದಯಾಳ್ ಪದ್ಮನಾಭನ್ ಸಂತಸ ವ್ಯಕ್ತಪಡಿಸಿದ್ದಾರೆ. 'ಇಂದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಅನೌನ್ಸ್ ಆಗಿದೆ, ನಮ್ಮ ಆ 'ಕರಾಳ ರಾತ್ರಿ' ಸಿನಿಮಾ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ, ಅಲ್ಲದೆ ಅತ್ಯುತ್ತಮ ನಿರ್ದೇಶಕ ಹಾಗೂ ಪೋಷಕ ನಟಿ ಪ್ರಶಸ್ತಿ ಕೂಡಾ ನಮ್ಮ ಸಿನಿಮಾಗೆ ಸಿಕ್ಕಿದೆ. ಈ ಸಿನಿಮಾ ನನಗೆ ತುಂಬಾ ವಿಶೇಷವಾಗಿದೆ. ನಮ್ಮ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಹಾಗೂ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಶಸ್ತಿ ಮಿಸ್ ಆಗಿತ್ತು. ಇದರಿಂದ ನನಗೆ ಬಹಳ ಬೇಸರವಾಗಿತ್ತು. ಆದರೂ ಖಂಡಿತ ರಾಜ್ಯಪ್ರಶಸ್ತಿ ದೊರೆಯುತ್ತದೆ ಎಂಬ ಬಲವಾದ ನಂಬಿಕೆ ಇತ್ತು. ಅದು ಈಗ ನಿಜವಾಗಿದೆ, ಕೊನೆಗೂ ನಮ್ಮ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ದೊರೆತಿದೆ. ಇದರಿಂದ ನನ್ನ ಜವಾಬ್ದಾರಿ ಕೂಡಾ ಇನ್ನೂ ಹೆಚ್ಚಾಗಿದೆ. ಇನ್ನು ಮುಂದೆ ಕನ್ನಡದ ಸಾಹಿತ್ಯವನ್ನು ಆಯ್ಕೆ ಮಾಡಿಕೊಂಡು ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ' ಎಂದು ಹೇಳುವ ಮೂಲಕ ದಯಾಳ್ ಪದ್ಮನಾಭನ್ ಸಂತೋಷ ವ್ಯಕ್ತಪಡಿಸಿದ್ದಾರೆ.