ಸೆಪ್ಟೆಂಬರ್ 18 ಬಂತೆಂದರೆ ಕನ್ನಡ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.ಯಾಕಂದ್ರೆ, ಸೆ.18 ಕನ್ನಡದ ಮೂರು ಪ್ರಸಿದ್ದ ವ್ಯಕ್ತಿಗಳ ಜನುಮದಿನ. ಆ ಮೂರು ಸಿನಿ ದಿಗ್ಗಜರುಗಳೇ ಸಾಹಸ ಸಿಂಹ ಡಾ.ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಶ್ರುತಿ.
ಡಾ.ವಿಷ್ಣುವರ್ಧನ್ ಅವರು ಕಾಲವಾದ ನಂತರ ಇದು 10ನೇ ವರ್ಷದ ಜನುಮ ದಿನವನ್ನು ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಆಚರಿಸುತ್ತಿದೆ. ಡಾ.ವಿಷ್ಣು ಸೇನಾ ಸಮಿತಿ ವಿಷ್ಣು ರಂಗ ನಮನ ಆಚರಿಸುತ್ತಿದೆ. ಇದು ನಾಟಕಗಳು ಹಾಗೂ ಡಾ.ವಿಷ್ಣು ಅಭಿನಯದ ಸಿನಿಮಾಗಳ ಗೀತೆಗಳ ಮೂಲಕ ಹುಟ್ಟುಹಬ್ಬ ಆಚರಿಸಲಾಗುತ್ತದೆ.
ಇನ್ನು, ಡಾ.ಭಾರತಿ ವಿಷ್ಣುವರ್ಧನ್ ತಮ್ಮ ಮನೆಯಲ್ಲೇ ಆಚರಣೆ ಮಾಡಲಿದ್ದಾರೆ. ಇಂದು ಬೆಂಗಳೂರಿನಲ್ಲೇ ಡಾ. ವಿಷ್ಣು ಸ್ಮಾರಕ ಬೇಕು ಎನ್ನುವ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋ ಪಕ್ಕದ ಎರಡು ಎಕರೆ ಜಾಗದಲ್ಲಿ (ಎಲ್ಲಿ ಡಾ.ವಿಷ್ಣುವರ್ಧನ ಅವರ ಅಂತ್ಯಕ್ರಿಯೆ ಆಗಿತ್ತೋ ಅಲ್ಲಿ) ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಹೂವಿನ ಅಲಂಕಾರ, ರಕ್ತದಾನ, ಆರೋಗ್ಯ ತಪಾಸಣೆ, ಅನ್ನದಾನ ಸಹ ಇಲ್ಲಿ ನಡೆಯಲಿದೆ.
ಇನ್ನು, ಉಪೇಂದ್ರ ತಮ್ಮ ಜನುಮ ದಿನಕ್ಕೆ ಅಭಿಮಾನಿಗಳು ಹಾರ, ಕೇಕ್ ತರಬೇಡಿ ಎಂದು ಕೋರಿಕೊಂಡಿದ್ದಾರೆ. ಇದರ ಬದಲು ಅಭಿಮಾನಿಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಿ ಎನ್ನುವ ಮೂಲಕ ಪರಿಸರ ಕಾಳಜಿ ತೋರಿದ್ದಾರೆ. ಉಪೇಂದ್ರ ಹಾಗೂ ಆರ್.ಚಂದ್ರು ಅವರ ಮೂರನೇ ಸಿನಿಮಾ ‘ಕಬ್ಜ’ ಈ ಜನುಮ ದಿನಕ್ಕೆ ಘೋಷಣೆ ಆಗಿದೆ. ಮತ್ತೆ ನಿರ್ಮಾಪಕ ಎಂ.ಚಂದ್ರಶೇಖರ್ ನಿರ್ಮಾಣದಲ್ಲಿ ಸಹ ಉಪೇಂದ್ರ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ . ನಾಯಕಿ ಶ್ರುತಿ ಎಂದಿನಂತೆ ಹೆಚ್ಚು ಆಡಂಬರ ಇಲ್ಲದೆ ತಮ್ಮ ಮನೆಯಲ್ಲಿ ಹೆತ್ತವರ ಜೊತೆ ಮತ್ತು ಮಗಳು ಗೌರಿ ಜೊತೆ ಜನುಮದಿನ ಆಚರಿಸಿಕೊಳ್ಳಲಿದ್ದಾರೆ.