ಜುಲೈ 9 ಬಾಲಿವುಡ್ ಚಿತ್ರರಂಗದ ರೊಮ್ಯಾಂಟಿಕ್, ದುರಂತ ನಾಯಕ ಗುರುದತ್ ಅವರ ಜನ್ಮದಿನ. 9 ಜುಲೈ 1925 ರಂದು ಜನಿಸಿ 1964 ರಲ್ಲಿ ಗುರುದತ್ ನಿಧನರಾದರು. ಆಗ ಅವರಿಗೆ ಕೇವಲ 39 ವರ್ಷಗಳು.
ವಿಶೇಷ ಎಂದರೆ ಗುರುದತ್ ಹುಟ್ಟಿದ್ದು ಬೆಂಗಳೂರಿನ ಮಲ್ಲೇಶ್ವರಂ ಆಸ್ಪತ್ರೆಯಲ್ಲಿ. ಇವರು ಪಡುಕೋಣೆ ಕುಟುಂಬಕ್ಕೆ ಸೇರಿದವರಾಗಿದ್ದು ದೀಪಿಕಾ ಕೂಡಾ ಗುರುದತ್ ಅವರ ದೂರದ ಸಂಬಂಧಿಯಾಗಬೇಕು. ತಾವು 2 ವರ್ಷದವರಿರುವಾಗ ಗುರುದತ್ ಪೋಷಕರೊಂದಿಗೆ ಪಶ್ಚಿಮ ಬಂಗಾಳ ಸೇರುತ್ತಾರೆ. ನಂತರ ಮುಂಬೈಗೆ ಬಂದಾಗ ಕನ್ನಡ ವ್ಯಕ್ತಿಗಳ ಸಂಪರ್ಕ ಕೂಡಾ ಹೊಂದುತ್ತಾರೆ. ಅದರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ವಿ.ಕೆ. ಮೂರ್ತಿ ಪ್ರಮುಖರು. ಇವರೊಂದಿಗೆ ಈಶ್ವರ್ ಬಿದ್ರಿ, ಪದ್ಮನಾಭ, ವಿಶ್ವನಾಥ್, ಗುರುಸ್ವಾಮಿ ಹಾಗೂ ಇನ್ನಿತರ ಕನ್ನಡಿಗರು ಕೆಲಸ ಮಾಡಿದ್ದಾರೆ.
ಗುರುದತ್ ಎಂದರೆ ನೆನಪಿಗೆ ಬರುವುದು ಮಹಮದ್ ರಫಿ ಹಾಡಿರುವ 'ಚೌದಿವಿ ಕಾ ಚಾಂದ್ ಹೋ ' ಹಾಡು. ಈ ಹಾಡಿನ ಮೊದಲ ಸಾಲು ಈ ಚಿತ್ರದ ಶೀರ್ಷಿಕೆ ಕೂಡಾ. ಗುರುದತ್ ಹಾಗೂ ವಹಿದಾ ರೆಹಮಾನ್ ಅವರು ನಟಿಸಿದ್ದ ಈ ಹಾಡಿನ ಚಿತ್ರೀಕರಣ ಮಾಡಿದ್ದು ವಿ.ಕೆ. ಮೂರ್ತಿ ಈ ಚಿತ್ರದ ಲೈಟಿಂಗ್ ಆಗ ಬಹಳ ಚರ್ಚೆ ಆಗಿತ್ತು.
ಗುರುದತ್ ಹಾಗೂ ವಿ.ಕೆ. ಮೂರ್ತಿ ಸುಮಾರು 15ಕ್ಕೂ ಹೆಚ್ಚು ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಆದರೆ ಈ 'ಚೌದಿವಿ ಕಾ ಚಾಂದ್ ಹೋ ' ಹಾಡಿಗೆ ಗುರುದತ್ ಅವರು ವಿ.ಕೆ. ಮೂರ್ತಿ ಅವರೇ ಬೇಕು ಅಂತ ಕೇಳಿಕೊಂಡಿದ್ದರು. ಈ ಚಿತ್ರದೊಂದಿಗೆ ಮೂರ್ತಿ ಹಾಗೂ ಗುರುದತ್ ಅವರ ಬಾಜಿ, ಪ್ಯಾಸ, ಕಾಗಜ್ ಕೆ ಫೂಲ್, ಆರ್ ಪಾರ್, ಸಿಐಡಿ, 12 ಓ ಕ್ಲಾಕ್, ಮಿಸ್ಟರ್ ಅಂಡ್ ಮಿಸೆಸ್ 55 ಬಹಳ ಜನಪ್ರಿಯತೆ ಪಡೆಯಿತು.
ಇವರಿಬ್ಬರ ನಡುವೆ ಎಷ್ಟು ಒಡನಾಟ ಇತ್ತು ಎಂದರೆ ಗುರುದತ್ ಅವರು ನಿಧನರಾದಾಗ ವಿ.ಕೆ. ಮೂರ್ತಿ ಅವರು 'ನನ್ನ ಸೃಜನಶೀಲತೆಯ ಅಂಗವೇ ಕೊನೆಯಾಯಿತು' ಎಂದು ಹೇಳಿಕೊಂಡಿದ್ದರು. ಗುರುದತ್ ಹಾಗೂ ವಿ.ಕೆ. ಮೂರ್ತಿ ಅವರ ಪ್ರೀತಿಯ ಜಗಳ ಸಂಜೆ ಮಾತುಂಗ ಮದ್ರಾಸ್ ಕೆಫೆಯಲ್ಲಿ ಮಸಾಲೆ ದೋಸೆ ಹಾಗೂ ಕಾಫಿಯಿಂದ ಕೊನೆಯಾಗುತ್ತಿತ್ತು ಎಂದು ಅಂದಿನ ಕಾಲದಲ್ಲಿ ಮುಂಬೈನಲ್ಲಿ ಸಹ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಬಿ. ಎಸ್. ಬಸವರಾಜ್ ನೆನಪಿಸಿಕೊಳ್ಳುತ್ತಾರೆ.
ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ ಅಲಿಯಾಸ್ ಗುರುದತ್ ಹಿಂದಿ ಸಿನಿಮಾ ರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕ, ನೃತ್ಯ ನಿರ್ದೇಶಕ ಸಹ ಆಗಿ ಹೆಸರು ಮಾಡಿದ್ದು ಇತಿಹಾಸದ ಪುಟಗಳಲ್ಲಿ ಸೇರಿದೆ. ಅಭಿನಯ ವಿಚಾರಕ್ಕೆ ಬಂದರೆ ಪ್ಯಾಸ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಂ, ಚೌದಿವಿ ಕಾ ಚಾಂದ್ ಹೋ ಇಂದಿಗೂ ಜನಪ್ರಿಯ ಹಿಂದಿ ಸಿನಿಮಾಗಳು. ವಿಶ್ವದ 100 ಬೆಸ್ಟ್ ಸಿನಿಮಾಗಳಲ್ಲಿ ಗುರುದತ್ ಅವರ ಸಿನಿಮಾಗಳು ಕೂಡಾ ಪಟ್ಟಿಯಲ್ಲಿ ಇದೆ. ಇವರ ಸಿನಿಮಾಗಳು ದೇಶ ವಿದೇಶಗಳಲ್ಲಿ ಹೌಸ್ಫುಲ್ ಪ್ರದರ್ಶನ್ ಆದ ಉದಾಹರಣೆ ಇದೆ. ಏಷ್ಯಾ ಖಂಡದ 25 ಬೆಸ್ಟ್ ನಟರ ಪೈಕಿ ಗುರುದತ್ ಕೂಡಾ ಒಬ್ಬರು.
ಗುರುದತ್ ತಾಯಿ 13ನೇ ವಯಸ್ಸಿಗೆ ಮದುವೆಯಾಗಿದ್ದರಿಂದ ತಾಯಿ ಮಗ ಇಬ್ಬರೂ ಜೊತೆ ಸೇರಿ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು ಬರೆಯುತ್ತಾರೆ. ಗುರುದತ್ ಕೆಲವೊಂದು ಪತ್ರಿಕೆಗಳಿಗೆ ಲೇಖನಗಳನ್ನು ಕೂಡಾ ಬರೆದಿದ್ದಾರೆ. ಪೇಯ್ಟಿಂಗ್ ಹಾಗೂ ನೃತ್ಯದಲ್ಲಿ ಕೂಡಾ ಅವರಿಗೆ ಬಹಳ ಆಸಕ್ತಿ ಇತ್ತು.
1944 ರಲ್ಲಿ ಸಹಾಯಕ ನಿರ್ದೇಶಕ, ನೃತ್ಯ ನಿರ್ದೇಶಕ ಹಾಗೂ ನಟ ಆಗಿ ಬಾಲಿವುಡ್ಗೆ ಕಾಲಿಟ್ಟ ಗುರುದತ್ ಅವರಿಗೆ ದೇವಾನಂದ್ ಪರಿಚಯ ಆಗಿದ್ದು ಒಂದು ಆಕಸ್ಮಿಕ ಘಟನೆ ಮೂಲಕ. ವಸ್ತ್ರ ವಿನ್ಯಾಸಕ ಇವರಿಬ್ಬರ ಷರ್ಟ್ ಬದಲಾವಣೆ ಮಾಡಿದ್ದರಿಂದ ಗುರುದತ್ ಹಾಗೂ ದೇವಾನಂದ್ ಮುಂದೆ ಆತ್ಮೀಯ ಸ್ನೇಹಿತರಾಗುತ್ತಾರೆ. ದೇವಾನಂದ್ ಅವರ 'ಬಾಜಿ' ಚಿತ್ರಕ್ಕೆ ಗುರುದತ್ ನಿರ್ದೇಶನ ಮಾಡುವ ಮೂಲಕ ಸ್ವತಂತ್ಯ್ರ ನಿರ್ದೇಶಕರಾದರು. ಈ ಚಿತ್ರದ ಸನ್ನಿವೇಶವೊಂದನ್ನು ಕೂಡಾ ವಿ.ಕೆ. ಮೂರ್ತಿ ಅವರ ಐಡಿಯಾದಂತೆ ಚಿತ್ರೀಕರಿಸಲಾಗಿದೆ.
'ಬಾಜಿ ' ಚಿತ್ರದ ನಂತರ ಗುರುದತ್ ಹಾಗೂ ವಿ.ಕೆ. ಮೂರ್ತಿ ಕೂಡಾ ಬಹಳ ಹತ್ತಿರವಾಗುತ್ತಾರೆ. ಅಲ್ಲಿಂದ ಸುಮಾರು 15 ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ.
ಗುರುದತ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರೂ ವೈಯಕ್ತಿಕ ಜೀವನ ಸ್ವಲ್ಪವೂ ಚೆನ್ನಾಗಿರಲಿಲ್ಲ. ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ ಮೂರನೇ ಬಾರಿಗೆ ಅವರನ್ನು ಜವರಾಯ ಉಳಿಸಲಿಲ್ಲ. 1964 ರಲ್ಲಿ ಗುರುದತ್ ಕೊನೆಯುಸಿರೆಳೆದರು.