ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕಳೆದ ಹಲವು ದಿನಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದು, ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ಖಚಿತಪಡಿಸಿವೆ. ಅವರ ನಿವಾಸದಲ್ಲಿ ಸಿಕ್ಕ ಕೆಲವು ದಾಖಲೆಗಳ ಪ್ರಕಾರ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಖಿನ್ನತೆ, ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡದಲ್ಲಿದ್ದರು ಎಂದು ತಿಳಿದು ಬಂದಿದೆ. ಆದರೆ, ವೈದ್ಯರು ಸೂಚಿಸಿದ ಯಾವುದೇ ಔಷಧಗಳನ್ನು ಸುಶಾಂತ್ ತೆಗೆದುಕೊಳ್ಳುತ್ತಿರಲಿಲ್ಲ.
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಇಬ್ಬರು ಅಡುಗೆಯವರು ಮತ್ತು ಅವರ ಕ್ರಿಯೇಟಿವ್ ಮ್ಯಾನೇಜರ್ ಮನೆಯಲ್ಲಿದ್ದರು. ತನಿಖೆಯ ಉದ್ದೇಶಕ್ಕಾಗಿ, ಪೊಲೀಸರು ಅವರ ಬಳಿ ಹೇಳಿಕೆ ಪಡೆದುಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಸುಶಾಂತ್ ಯಾವುದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರಲಿಲ್ಲ. ಸಾಯುವ ಕೆಲವೇ ಕ್ಷಣಗಳ ಮೊದಲು ಗೆಳತಿ ರಿಯಾ ಚಕ್ರವರ್ತಿ ಮತ್ತು ಸ್ನೇಹಿತ ಮಹೇಶ್ ಶೆಟ್ಟಿಗೆ ಸುಶಾಂತ್ ಕರೆ ಮಾಡಿದ್ದರು. ಆದರೆ ಇಬ್ಬರು ಕೂಡ ಕರೆ ಸ್ವೀಕರಿಸಿರಲಿಲ್ಲ.
ಮೂಲಗಳ ಪ್ರಕಾರ, ಸುಶಾಂತ್ ಮತ್ತು ರಿಯಾ ಕೆಲವು ದಿನಗಳಿಂದ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ತನಿಖೆಯ ಭಾಗವಾಗಿ ರಿಯಾ, ಮಹೇಶ್, ಮಾಜಿ ಗೆಳತಿ ಅಂಕಿತಾ ಲೋಖಂಡೆ ಮತ್ತು ಕಳೆದ 24 ಗಂಟೆಗಳಲ್ಲಿ ಅವರು ಸಂಪರ್ಕಿಸಿದವರನ್ನು ಪ್ರಶ್ನಿಸಲು ಪೊಲೀಸ್ ಅಧಿಕಾರಿಗಳು ಸಜ್ಜಾಗಿದ್ದಾರೆ.