ನವದೆಹಲಿ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಹೆಸರು ತಳುಕು ಹಾಕಿಕೊಂಡಿರುವ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿದೆ.
ರಿಯಾ ಚರ್ಕವರ್ತಿಯೊಂದಿಗೆ ತಮ್ಮ ಹೆಸರು ಕೇಳಿಬರುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡುತ್ತಿವೆ. ಇದನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಬೇಕೆಂದು ಕೋರಿ ರಾಕುಲ್ ಪ್ರೀತ್ ಸಿಂಗ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಕೋರ್ಟ್ ಇವತ್ತು ಕೈಗೆತ್ತಿಕೊಂಡಿತು.
ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಏಕಸದಸ್ಯ ಪೀಠ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಪ್ರಸಾರ ಭಾರತಿ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ನೋಟಿಸ್ ನೀಡಿದೆ.
ರಾಕುಲ್ ಮೇಲ್ಮನವಿಯನ್ನು ಪ್ರಾಧಿಕಾರಗಳು ಪ್ರತಿನಿಧಿಯಂತೆ ಸ್ವೀಕರಿಸಬೇಕು. ಅಕ್ಟೋಬರ್ 15ಕ್ಕೆ ನಡೆಯಲಿರುವ ಮುಂದಿನ ವಿಚಾರಣೆ ವೇಳೆಗೆ ಈ ನಿರ್ಧಾರಕ್ಕೆ ಬರುವಂತೆ ಕೋರ್ಟ್ ಹೇಳಿದೆ. ಅಲ್ಲದೆ, ಮಾಧ್ಯಮಗಳು ಇವರ ಕುರಿತಾದ ವರದಿಯನ್ನು ಸ್ಥಗಿತಗೊಳಿಸುವ ಮೂಲಕ ಕೇಬಲ್ ಟಿವಿ ನಿಯಮಗಳನ್ನು ಪಾಲಿಸುವ ವಿಶ್ವಾಸವಿದೆ ಎಂದು ಕೋರ್ಟ್ ಹೇಳಿದೆ.