ಮುಂಬೈ/ಹೈದರಾಬಾದ್ : ಬಾಲಿವುಡ್ ನಟಿ ಜಿಯಾ ಖಾನ್ ಮೃತಪಟ್ಟ 8 ವರ್ಷಗಳ ಬಳಿಕ ಈ ನಿಗೂಢ ಸಾವಿನ ಪ್ರಕರಣ ಇಂದು (ಶುಕ್ರವಾರ) ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದೆ. ತಾರ್ಕಿಕ ಅಂತ್ಯ ಕಾಣಿಸಲು ಸೆಷನ್ಸ್ ಕೋರ್ಟ್ ಈ ಪ್ರಕರಣವನ್ನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದೆ.
ಪ್ರಕರಣದಲ್ಲಿ ಆಕೆಯ ಗೆಳೆಯ ನಟ ಸೂರಜ್ ಪಂಚೋಲಿಯ ಹೆಸರು ಕೇಳಿ ಬಂದಿತ್ತು. ಹಾಗಾಗಿ, ಈ ನಿಗೂಢ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಪಾಂಚೋಲಿ ವಿರುದ್ಧದ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯವು ನಡೆಸುತ್ತಿತ್ತು. ಇದೀಗ ಈ ಪ್ರಕರಣದ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಜೂನ್ 3, 2013ರಂದು ಜಿಯಾ ಖಾನ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಟಿಯ ಸಾವಿನ ಪ್ರಕರಣವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಪ್ರಾಥಮಿಕ ತನಿಖೆಯಲ್ಲಿ ಜಿಯಾ ಅವರದ್ದು ಆತ್ಮಹತ್ಯೆ ಎಂದು ಹೇಳಲಾಗಿತ್ತು.
ಆದರೆ, ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಮೃತ ನಟಿ ಜಿಯಾ ಖಾನ್ ಅವರ ತಾಯಿಯು ಸೂರಜ್ ಪಂಚೋಲಿ ಮೇಲೆ ಆರೋಪ ಮಾಡಿದ್ದರು. ಪ್ರಕರಣದಿಂದ ನಟ ಸೂರಜ್ ಜೈಲಿಗೂ ಹೋಗಿ ಜಾಮೀನಿನ ಮೇಲೆ ಹೊರ ಬಂದಿದ್ದರು.
ಆರೋಪಿಗಳು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು. ಹಾಗಾಗಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ರಿಯಾಳ ತಾಯಿ ರಬಿಯಾ ಖಾನ್ ಹೈಕೋರ್ಟ್‌ಗೆ ಮನವಿ ಸಲ್ಲಿದ್ದರು. ಇವರ ಮನವಿ ಆಲಿಸಿದ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುವಂತೆ ಆದೇಶ ನೀಡಿತ್ತು. ಅದರಂತೆ ಈಗ ಸಿಬಿಐ ಈ ನಿಗೂಢ ಸಾವಿನ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಗಜನಿ, ಹೌಸ್‌ಫುಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಮೃತ ಜಿಯಾ ಖಾನ್ ಅಭಿನಯಿಸಿದ್ದರು.