ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ಇದರ ನಡುವೆಯೇ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ನಟಿ ರಿಯಾ ಚಕ್ರವರ್ತಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಿಯಾಂಕಾ ಸಿಂಗ್ ನಕಲಿ ವೈದ್ಯಕೀಯ ಚೀಟಿ ಸೃಷ್ಟಿಸಿ ಎಲ್ಲರಿಗೂ ಶೇರ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನು ರಿಯಾ ಚಕ್ರವರ್ತಿ ಅವರ ವಕೀಲ ಸತೀಶ್ ಮನೆಶಿಂದೆ ಖಾತ್ರಿ ಪಡಿಸಿದ್ದಾರೆ.
ಎನ್‌ಡಿಪಿಎಸ್ ಕಾಯ್ದೆ ಮತ್ತು ಟೆಲಿ ಮೆಡಿಸಿನ್ ಪ್ರಾಕ್ಟೀಸ್ ಮಾರ್ಗಸೂಚಿ 2020ರಡಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ.ತರುಣ್ ಕುಮಾರ್ ಹಾಗೂ ಇನ್ನಿತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ ಎಂದು ವಕೀಲ ಸತೀಶ್ ಸ್ಪಷ್ಟಪಡಿಸಿದ್ದಾರೆ.
ಸುಶಾಂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೇಳಿ ಬರುತ್ತಿರುವ ಡ್ರಗ್ಸ್ ಜಾಲ ಕುರಿತು ರಿಯಾ ಚಕ್ರವರ್ತಿ 2ನೇ ದಿನವಾದ ಇಂದು ಕೂಡ ಎನ್‌ಸಿಬಿ ಮುಂದೆ ವಿಚಾರಣೆಗೆ ಹಾಜರಾಗಿದ್ದರು.