ಹೃದಯಾಘಾತಕ್ಕೊಳಗಾಗಿ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವಿಚಾರವನ್ನು ರೆಮೋ ಪತ್ನಿ ಲಿಜೆಲ್ ಮಾಧ್ಯಮಗಳಿಗೆ ತಿಳಿಸಿದ್ದು ರೆಮೋ ಈಗ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
- " class="align-text-top noRightClick twitterSection" data="
">
ಡಿಸೆಂಬರ್ 11 ರಂದು ರೆಮೋಗೆ ಹೃದಯಾಘಾತವಾಗಿದ್ದರಿಂದ ಕೂಡಲೇ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅಂಜಿಯೋಪ್ಲಾಸ್ಟಿ ಮಾಡಿ ಚಿಕಿತ್ಸೆ ನೀಡಿದ್ದರು. ಒಂದು ವಾರಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೆಮೋ ಡಿಸೋಜಾ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ರೆಮೋಗೆ ಹೃದಯಾಘಾತವಾದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಬಾಲಿವುಡ್ ಸೆಲಬ್ರಿಟಿಗಳು ಆಘಾತ ವ್ಯಕ್ತಪಡಿಸಿದ್ದರು. ರೆಮೋ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ ಇದೀಗ ಅವರು ಡಿಸ್ಚಾರ್ಜ್ ಆಗಿರುವ ಸುದ್ದಿ ಕೇಳಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ರೆಮೋ ಕೂಡಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು "ನಿಮ್ಮೆಲ್ಲರ ಪ್ರೀತಿಗೆ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ಸಿದ್ಧತೆಯಲ್ಲಿ 'ಲವ್ ಮಾಕ್ಟೈಲ್' ಜೋಡಿ: ಕಾಂಚೀಪುರಂನಲ್ಲಿ ಶಾಪಿಂಗ್
ರೆಮೋ ಡಿಸೋಜಾ 1995 ರಿಂದ ಬಾಲಿವುಡ್ನಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಥಿಯಾ, ಧೂಮ್, ಲಕ್ಕಿ, ವಕ್ತ್, ರಾಕಿ, ಆರ್ಯನ್, ಕ್ಯಾಷ್, ಸ್ಪೀಡ್, ಸ್ಟೂಡೆಂಟ್ ಆಫ್ ದಿ ಇಯರ್, ಎಬಿಸಿಡಿ, ಕ್ರಿಷ್ 3, ಬಜ್ರಂಗಿ ಭಾಯಿಜಾನ್, ರೇಸ್ 3, ಕಳಂಕ್, ಸ್ಟ್ರೀಟ್ ಡ್ಯಾನ್ಸರ್ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಅವರು ನಟಿಸಿದ್ದು ಕಿರುತೆರೆ ಡ್ಯಾನ್ಸಿಂಗ್ ಶೋ ಜಡ್ಜ್ ಆಗಿ ಕೂಡಾ ಕಾರ್ಯ ನಿರ್ವಹಿಸಿದ್ದಾರೆ.