ಪಾಟ್ನಾ (ಬಿಹಾರ): ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ತನಿಖೆಗೆ ತೆರಳಿದ್ದ ಪಾಟ್ನಾ ಪೊಲೀಸ್ ತಂಡದ ಮುಖ್ಯಸ್ಥ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನು ಮುಂಬೈ ಮಹಾನಗರ ಪಾಲಿಕೆ ಬಲವಂತವಾಗಿ ಕ್ವಾರಂಟೈನ್ಗೆ ಒಳಪಡಿಸಿದೆ. ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಅವರೇ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ಭಾನುವಾರ ಮುಂಬೈಗೆ ತೆರಳಿದ ಪಾಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ತಿವಾರಿ ಅವರನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಕ್ವಾರಂಟೈನ್ಗೆ ಒಳಪಡಿಸಿದೆ ಎಂದು ಡಿಜಿಪಿ ಪಾಂಡೆ ಆರೋಪಿಸಿದ್ದಾರೆ.
"ಐಪಿಎಸ್ ಅಧಿಕಾರಿ ವಿನಯ್ ತಿವಾರಿ ನಿನ್ನೆ ಪೊಲೀಸ್ ತಂಡವನ್ನು ಮುನ್ನಡೆಸಲು ಅಧಿಕೃತ ಕರ್ತವ್ಯದಿಂದ ಪಾಟ್ನಾದಿಂದ ಮುಂಬೈಗೆ ತೆರಳಿದ್ದರು. ಆದರೆ ಅವರನ್ನು ರಾತ್ರಿ 11 ಗಂಟೆಗೆ ಬಿಎಂಸಿ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್ಗೆ ಒಳಪಡಿಸಿದ್ದಾರೆ. ವಿನಂತಿಯ ಹೊರತಾಗಿಯೂ ಅವರಿಗೆ ಐಪಿಎಸ್ ಮೆಸ್ನಲ್ಲಿ ವಸತಿ ಒದಗಿಸಲಾಗಿಲ್ಲ. ಹೀಗಾಗಿ ಅವರು ಗೋರೆಗಾಂವ್ನಲ್ಲಿರುವ ಗೆಸ್ಟ್ಹೌಸ್ನಲ್ಲಿದ್ದರು" ಎಂದು ಬಿಹಾರ ಡಿಜಿಪಿ ಟ್ವೀಟ್ ಮಾಡಿದ್ದಾರೆ.
ನಟಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಕೆ.ಕೆ.ಸಿಂಗ್ ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಬಿಹಾರ ಪೊಲೀಸರ ತಂಡ ಮುಂಬೈನಲ್ಲಿದೆ.
ಮುಂಬೈನ ಮುನ್ಸಿಪಲ್ ಕಾರ್ಪೊರೇಶನ್‌ನ (ಎಂಸಿಜಿಎಂ) ಕಾರ್ಪೋರೇಟರ್ ಮತ್ತು ಬಿಜೆಪಿ ಮುಖಂಡ ವಿನೋದ್ ಮಿಶ್ರಾ ಅವರು ಮುಂಬೈನಲ್ಲಿ ಪಾಟ್ನಾ ಎಸ್‌ಎಸ್‌ಪಿ ಅವರನ್ನು ಬಲವಂತವಾಗಿ ಕ್ವಾರಂಟೈನ್ಗೆ ಒಳಪಡಿಸಿರುವುದನ್ನು ಖಂಡಿಸಿದ್ದಾರೆ.
ಮುಂಬೈ ತಲುಪಿದ ನಂತರ ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಸುದ್ದಿಗಾರರೊಂದಿಗೆ ಮಾತನಾಡಿ, "ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಹಿರಿಯ ಅಧಿಕಾರಿಗಳು ನಮ್ಮ ತನಿಖೆಯಿಂದ ತೃಪ್ತರಾಗಿದ್ದಾರೆ. ನಮ್ಮ ತಂಡ ಕಳೆದ ಒಂದು ವಾರದಿಂದ ಇಲ್ಲಿ ತನಿಖೆ ನಡೆಸುತ್ತಿದೆ. ಮುಂದಿನ ಹಂತದ ತನಿಖೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಯ ಅಗತ್ಯವಿದೆ. ಆದ್ದರಿಂದ ನನ್ನನ್ನು ಇಲ್ಲಿಗೆ ಕಳುಹಿಸಲಾಗಿದೆ. ಎಲ್ಲ ಪ್ರಮುಖ ಸಾಕ್ಷ್ಯಗಳು ಮತ್ತು ಸಂಗತಿಗಳನ್ನು ಪಡೆಯಲು ನಾವು ಇಲ್ಲಿದ್ದೇವೆ. ನಾವು ಸಂಬಂಧಪಟ್ಟ ಜನರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರಕರಣದ ಪ್ರತಿಯೊಂದು ಕೋನವನ್ನು ನಾವು ತನಿಖೆ ಮಾಡುತ್ತಿದ್ದೇವೆ" ಎಂದರು.
ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್, ಚಲನಚಿತ್ರ ವಿಮರ್ಶಕ ರಾಜೀವ್ ಮಸಂದ್, ನಿರ್ದೇಶಕ - ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಮತ್ತು ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಸೇರಿದಂತೆ 41 ಜನರ ಹೇಳಿಕೆಗಳನ್ನು ಇದುವರೆಗೆ ತನಿಖೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.