ಮುಂಬೈ : ಲಾಕ್ಡೌನ್ ಘೋಷಿಸುವ ಮೊದಲು ನಟಿ ಆಲಿಯಾ ಭಟ್ 'ಗಂಗೂಬಾಯಿ ಕಥಿಯಾವಾಡಿ 'ಚಿತ್ರೀಕರಣದಲ್ಲಿ ನಿರತರಾಗಿದ್ದರು. ಲಾಕ್ಡೌನ್ ಕಾರಣ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಸೆಟ್‌ಗೆ ಬಂದಿರುವ ನಟಿ, ಗಂಗೂಬಾಯಿ ಕಥಿಯಾವಾಡಿ ತಂಡದೊಂದಿಗೆ ಮತ್ತೆ ಒಂದಾಗಲು ತುಂಬಾ ಖುಷಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
2020 ವರ್ಷ ಎಲ್ಲರ ಪಾಲಿಗೆ ಕರಾಳ ವರ್ಷ. ಅದರಲ್ಲೂ ಚಿತ್ರೋದ್ಯೋಮಕ್ಕಂತೂ ಹೆಚ್ಚಿನ ಹೊಡೆತ ನೀಡಿದೆ. ನಮಗೆಲ್ಲಾ ಇದು ಸವಾಲಿನ ವರ್ಷವಾಗಿತ್ತು ಎಂದಿರುವ 27ರ ಹರೆಯದ ಈ ಚೆಲುವೆ ಕೆಲವು ಕೋವಿಡ್ ಮಾರ್ಗಸೂಚಿಗಳೊಂದಿಗೆ ಸಿನಿಮಾ ಚಿತ್ರೀಕರಣ ಮರು ಆರಂಭವಾಗಿದೆ.
ಹಲವಾರು ತಿಂಗಳುಗಳ ನಂತರ ಕ್ಯಾಮೆರಾ ಎದುರಿಸಲು ಉತ್ಸುಕವಾಗಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ನಾವೆಲ್ಲಾ ಬಹಳ ಜಾಗರೂಕರಾಗಿದ್ದೇವೆ ಎಂದಿದ್ದಾರೆ. ಇದೇ ವೇಳೆ ಗಂಗೂಬಾಯಿಯಾಗಿ ತೆರೆ ಮೇಲೆ ಬರಲು ರೆಡಿ ಆಗ್ತಿರುವ ಈ ಬೆಡಗಿ ಬನ್ಸಾಲಿ ಟೀಂ ಜೊತೆ ಮತ್ತೆ ಸೇರಿದ್ದು ಖುಷಿ ತಂದಿದೆ ಅಂದಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ವೇಶ್ಯಾಗೃಹವೊಂದರ ಒಡತಿಯ ಸುತ್ತ ಸುತ್ತುವ ಕಥೆ ಹೊಂದಿದೆ. ಮಾಫಿಯಾ ರಾಣಿ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದು, ಗಂಗೂಬಾಯಿ ಕಥಿಯಾವಾಡಿಯವರನ್ನು 'ದಿ ಮೇಡಂ ಆಫ್ ಕಾಮಾಟಿಪುರ' ( Madame Of Kamathipura) ಎಂದೂ ಕರೆಯಲಾಗುತ್ತಿತ್ತು.
ಗಂಗೂಬಾಯಿ ಕಥಿಯಾವಾಡಿ ಹೊರತುಪಡಿಸಿ ಆಲಿಯಾ ಭಟ್ ಸದ್ಯ ಬ್ರಹ್ಮಾಸ್ತ್ರ, ಸಡಕ್ -2, ಆರ್ಆರ್ಆರ್ ಸೇರಿದಂತೆ ಇತರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.