ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಡಾನ್' ಸರಣಿ ಚಿತ್ರಗಳು ಸೂಪರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತು. 2006 ರಲ್ಲಿ ಡಾನ್ ಪ್ರೀಕ್ವೆಲ್ ಹಾಗೂ 2011 ರಲ್ಲಿ ಸ್ವೀಕ್ವೆಲ್ ಚಿತ್ರಗಳು ತೆರೆ ಕಂಡು ಬ್ಲಾಕ್ಬಸ್ಟರ್ ಸಿನಿಮಾ ಲಿಸ್ಟ್ಗೆ ಸೇರಿದ್ವು.
ಫರ್ಹಾನ್ ಅಖ್ತರ್ ನಿರ್ದೇಶನದ ಈ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ್ದವು. ಚಿತ್ರದಲ್ಲಿ ನಟಿಸಿದ್ದ ಶಾರುಖ್-ಪ್ರಿಯಾಂಕಾ ಚೋಪ್ರಾ ಅವರ ಕರಿಯರ್ಗೂ ಒಳ್ಳೆಯ ಮೈಲೇಜ್ ತಂದುಕೊಟ್ಟಿದ್ದವು. ಈ ಚಿತ್ರದಲ್ಲಿಯ ಖಾನ್-ಪಿಗ್ಗಿ ಕೆಮಿಸ್ಟ್ರಿ ಬಿಟೌನ್ ಮಂದಿ ಇಂದಿಗೂ ಮರೆತಿಲ್ಲ. ಇದೇ ಕಾರಣಕ್ಕಿರಬಹುದು, ಸದ್ಯ ಮುನ್ನೆಲೆಗೆ ಬಂದಿರುವ 'ಡಾನ್-3' ಚಿತ್ರದಲ್ಲಿಯೂ ಈ ಜೋಡಿಯೇ ನಟಿಸಲಿ ಎಂದು ಬಾಲಿವುಡ್ ಸಿನಿ ಪಂಡಿತರು ಬಯಸುತ್ತಿದ್ದಾರೆ.
ಹೌದು, ಫರ್ಹಾನ್ ಅಖ್ತರ್ ಡಾನ್-3 ಕೈಗೆತ್ತಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಕೆಲದಿನಗಳಿಂದ ಸಖತ್ ಸದ್ದು ಮಾಡ್ತಿದೆ. ಈ ಚಿತ್ರಕ್ಕೂ ಶಾರುಖ್ ಅವರೇ ನಾಯಕ ನಟ. ಆದರೆ, ಪ್ರಿಯಾಂಕಾ ನಟಿಸೋದು ಡೌಟ್. ಡಾನ್-2 ನಂತ್ರ ಇವರಿಬ್ಬರ ನಡುವೆ ಉಂಟಾದ 'ಕೋಲ್ಡ್ ವಾರ್' ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರ ಜತೆ ಜತೆಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ರೌಂಡ್ ಹೊಡೆಯುತ್ತಿದೆ. 'ಡಾನ್-3' ಯಲ್ಲಿ ಶಾರುಖ್ ಅವರನ್ನು ಕೈ ಬಿಟ್ಟು, ರಣ್ವೀರ್ ಸಿಂಗ್ ಅವರಿಗೆ ಮಣಿಹಾಕಲಾಗುತ್ತೆ. ಈಗಾಗಲೇ ಈ ಕುರಿತು ಮಾತುಕತೆ ಕೂಡ ನಡೆದಿದೆ ಎನ್ನುವ ಗುಸು-ಗುಸು ಶುರುವಾಗಿದೆ. ಇದೀಗ ಈ ಬಗ್ಗೆ ನಿರ್ದೇಶಕ ಫರ್ಹಾನ್ ಅವರೇ ಮಾತನಾಡಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿರುವ ಅವರು, 'ಡಾನ್-3' ಬಗ್ಗೆ ಮಾತಾಡಿ ಮಾತಾಡಿ ದಣಿದಿದ್ದೇನೆ. ಈ ಚಿತ್ರದಲ್ಲಿ ರಣ್ವೀರ್ ನಟನೆ ಬಗ್ಗೆ ನಾನೂ ಎಲ್ಲಿಯೂ ಹೇಳಿಲ್ಲ. ಜನರೇ ಶಾರುಖ್ ಪ್ಲೇಸ್ನಲ್ಲಿ ರಣ್ವೀರ್ ಅವರನ್ನು ಹಾಕಿಕೊಂಡು ಮಾತಾಡಿಕೊಳ್ಳುತ್ತಿದ್ದಾರೆ. ಇದು ಅವರಿಗೆ ಖುಷಿ ಕೊಡುತ್ತಿದೆ. ಈ ಬಗ್ಗೆ ಸದ್ಯಕ್ಕಂತೂ ನಾ ಏನೂ ಹೇಳೋಲ್ಲ. ಸಮಯ ಬಂದಾಗ ಎಲ್ಲವನ್ನೂ ಅಧಿಕೃತವಾಗಿ ಬಿಚ್ಚಿಡುತ್ತೇನೆ. ಇದರಲ್ಲಿ ಮುಚ್ಚಿಡುವಂತಹದ್ದು ಏನಿದೆ ಹೇಳಿ' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಒಟ್ಟಿನಲ್ಲಿ ಸದ್ಯ ಬಿಟೌನ್ ಗಲ್ಲಿಯ ಡಾನ್ ಸಖತ್ ಸದ್ದು ಮಾಡುತ್ತಿದೆ. ಬಾಲಿವುಡ್ನ ಡಾನ್ ಯಾರಾಗ್ತಾರೆ ಅನ್ನೋ ಚರ್ಚೆ ಸಣ್ಣಗೆ ಶುರುವಾಗಿದೆ. ಒಂದು ವೇಳೆ ಶಾರುಖ್ಗೆ ಕೊಕ್ ಕೊಟ್ಟಿದ್ದೆಯಾದ್ರೆ, ಬಾದ್ಷಾ ಫ್ಯಾನ್ಸ್ಗೆ ನಿರಾಶೆಯಾಗಲಿದೆ. ಇತ್ತ ರಣವೀರ್ ಸಿಂಗ್ ಅಭಿಮಾನಿಗಳು 'ಡಾನ್' ಸುದ್ದಿಯಿಂದ ಖುಷಿಯಾಗಿದ್ದಾರೆ. ಇನ್ನಷ್ಟೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ.