ಬಾಲಿವುಡ್ ರ‍್ಯಾಪ್ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿದೆ. ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಪತಿಯಿಂದ ರಕ್ಷಣೆ ಕೋರಿ ದೆಹಲಿಯ ತೀಸ್ ಹಜಾರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪತಿ ಹನಿ ಸಿಂಗ್ ತನ್ನ ಮೇಲೆ ಮನಬಂದಂತೆ ಹಲ್ಲೆ ಮಾಡುತ್ತಿದ್ದಾರೆ. ಇವರ ವರ್ತನೆಯಿಂದ ನಾನು ಮಾನಸಿಕವಾಗಿ ನೊಂದು ಹೋಗಿದ್ದೇನೆ ಎಂದು ಹನಿ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅವರ ಪತ್ನಿ ಶಾಲಿನಿ, ತನಗೆ ರಕ್ಷಣೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನು, ಹನಿ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
2011ರಲ್ಲಿ ಗುಪ್ತವಾಗಿ ಮದುವೆಯಾಗಿದ್ದ ಹನಿ ಸಿಂಗ್ ಹಾಗೂ ಶಾಲಿನ ತಲ್ವಾರ್ ಈ ವಿಚಾರವನ್ನು ಯಾರ ಬಳಿಯೂ ಬಹಿರಂಗ ಪಡಿಸಿರಲಿಲ್ಲ. ಕೆಲವು ದಿನಗಳ ಬಳಿಕ ಕಾರ್ಯಕ್ರಮವೊಂದರಲ್ಲಿ ತಾವು ಮದುವೆಯಾಗಿರುವುದಾಗಿ ಮೊದಲ ಬಾರಿಗೆ ಬಹಿರಂಗಪಡಿಸಿದ್ದರು.
ಇತ್ತೀಚೆಗೆ ಹನಿ ಸಿಂಗ್ ವರ್ತನೆ ಬದಲಾಗಿದೆ. ಪ್ರತಿ ದಿನ ನನ್ನ ಮೇಲೆ ಹಲ್ಲೆ, ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಪತ್ನಿ ತಮ್ಮ ದೂರಿನಲ್ಲಿ ದಾಖಲು ಮಾಡಿದ್ದಾರೆ. ಈ ಮೂಲಕ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ ಖುಷಿಯಲ್ಲಿದ್ದ ಹನಿ ಸಿಂಗ್ ಬಾಳಲ್ಲಿ ಈಗ ಬಿರುಗಾಳಿ ಎದ್ದಿದೆ. ಹನಿ ಸಿಂಗ್ ಅವರಿಗೆ ಆಗಷ್ಟ್ 28ರೊಳಗೆ ವಿವರಣೆ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.