2018 ಫೆಬ್ರವರಿ 24 ಸಿನಿಪ್ರಿಯರ ಪಾಲಿಗೆ ಕರಾಳ ದಿನ. ಅದ್ರು ಮೋಹಕ ತಾರೆ ಶ್ರೀದೇವಿ ನಿಧನದ ವಾರ್ತೆ ಎಲ್ಲರಿಗೂ ಆಘಾತ ನೀಡಿತ್ತು. ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮಕ್ಕೆಂದು ದುಬೈಗೆ ತೆರಳಿದ್ದ ಶ್ರೀದೇವಿ ಅಲ್ಲಿನ ಹೋಟೆಲೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಈ ಘಟನೆ ನಡೆದ ಒಂದು ವರ್ಷದ ನಂತರ ಕೇರಳ ಡಿಜಿಪಿಯೊಬ್ಬರು ಶ್ರೀದೇವಿ ಸಾವು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ. ಅಲ್ಲದೆ ವಿಧಿವಿಜ್ಞಾನ ತಜ್ಞ ಡಾ. ಉಮಾದಾತನ್ ಕೂಡಾ ಕೆಲವೊಂದು ಪುರಾವೆಗಳನ್ನು ನೋಡಿದರೆ, ಶ್ರೀದೇವಿಯದ್ದು ನೈಸರ್ಗಿಕ ಸಾವಲ್ಲ, ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಿರುವುದಾಗಿ ಅಂಕಣವೊಂದರಲ್ಲಿ ಬರೆದಿದ್ದರು.
ಇದೀಗ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶ್ರೀದೇವಿ ಪತಿ ಬೋನಿಕಪೂರ್, ಇಂತಹ ಕೆಲಸಕ್ಕೆ ಬಾರದ ಸುಳ್ಳುಗಳಿಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ. ಇಂತಹ ಅವಿವೇಕತನದ ಮಾತುಗಳನ್ನು ಜನರು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಆದ್ದರಿಂದ ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಲ್ಲಸಲ್ಲದನ್ನು ಕಲ್ಪಿಸಿಕೊಂಡು ಜನರು ಇಂತದ್ದನ್ನೆಲ್ಲಾ ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಬೋನಿಕಪೂರ್ ಅಜಿತ್ ಕುಮಾರ್ ನಟನೆಗೆ 'ನೇರ್ಕೊಂಡ ಪಾರ್ವೈ' ಸಿನಿಮಾವನ್ನು ನಿರ್ಮಿಸುತ್ತಿದ್ದು ಸಿನಿಮಾ ಆಗಸ್ಟ್ 10 ರಂದು ಬಿಡುಗಡೆಯಾಗುತ್ತಿದೆ.