ವಿಜಯವಾಡ(ಆಂಧ್ರಪ್ರದೇಶ): ಬಹುಭಾಷಾ ನಟ ಸೋನುಸೂದ್ ನಿನ್ನೆ ವಿಜಯವಾಡಕ್ಕೆ ಭೇಟಿ ನೀಡಿದ್ದು, ಪ್ರತಿಭಟನಾನಿರತ ರೈತರ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಸೋನು ಸೂದ್, ಖಂಡಿತವಾಗಿಯೂ ನಾನು ನಿಮ್ಮೊಂದಿಗಿದ್ದೇನೆ ಎಂದು ಹೇಳಿದ್ದಾರೆ.
ರಾಜ್ಯ ರಾಜಧಾನಿಯನ್ನು ವಿಭಜಿಸುವ ರಾಜ್ಯ ಸರ್ಕಾರದ ಯೋಜನೆಗಳ(ಹಲವು ಇಲಾಖೆಗಳ ಶಿಫ್ಟ್) ವಿರುದ್ಧ ರೈತರು ಅಮರಾವತಿಯ ವಿವಿಧ ಸ್ಥಳಗಳಲ್ಲಿ ಹೋರಾಟ ನಡೆಸುತ್ತಿದ್ದು, ಅವರ ಪ್ರತಿಭಟನೆ 632 ನೇ ದಿನಕ್ಕೆ ಕಾಲಿಟ್ಟಿದೆ. ಇವರೆಲ್ಲ ರಾಜ್ಯ ಮೊದಲಿನಂತೆ ಒಂದೇ ರಾಜಧಾನಿಯನ್ನ ಘೋಷಣೆ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಆಡಳಿತಾತ್ಮಕ ರಾಜಧಾನಿಯನ್ನು ವಿಶಾಖಪಟ್ಟಣಕ್ಕೆ ಮತ್ತು ನ್ಯಾಯಾಂಗ ರಾಜಧಾನಿಯನ್ನು ಕರ್ನೂಲ್‌ಗೆ ವರ್ಗಾಯಿಸಿ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಮತ್ತು ಅಮರಾವತಿಯನ್ನು ಕೇವಲ ಶಾಸಕಾಂಗ ರಾಜಧಾನಿಯಾಗಿ ಉಳಿಸಿಕೊಂಡಿದ್ದಾರೆ. ಜಗನ್ ಸರ್ಕಾರದ ಈ ನಿರ್ಧಾರ ಅಮರಾವತಿ ರೈತರನ್ನ ಕೆರಳಿಸಿದ್ದು, ಅಮರಾವತಿಯೊಂದನ್ನೇ ರಾಜಧಾನಿ ಎಂದು ಪುನಃ ಘೋಷಣೆ ಮಾಡಬೇಕೆಂದು ಇವರೆಲ್ಲ ಒತ್ತಾಯಿಸುತ್ತಿದ್ದಾರೆ.
ಖಾಸಗಿ ಆಸ್ಪತ್ರೆ ಉದ್ಘಾಟನೆಗೆಂದು ನಟ ಸೋನುಸೂದ್ ವಿಜಯವಾಡಕ್ಕೆ ತೆರಳಿದ್ದರು. ಈ ವೇಳೆ ಇಂದಿರಾ ಕಿಲಾದ್ರಿಯ ಕನಕದುರ್ಗ ದೇಗುಲಕ್ಕೆ ಭೇಟಿ ನೀಡಿ ದುರ್ಗಾದೇವಿ ದರ್ಶನ ಪಡೆದರು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಟಾರ್ಚರ್ ಹಾಡು ರಿಲೀಸ್: ಸಿನಿಮಾ ಬಿಡುಗಡೆ ದಿನವೂ ಫಿಕ್ಸ್
ಬಳಿಕ ಮಾತನಾಡಿದ ನಟ, ಆದಷ್ಟು ಬೇಗ ಕೋವಿಡ್ ನಿರ್ನಾಮವಾಗಿ ಜನಜೀವನ ಯಥಾಸ್ಥಿತಿಗೆ ಮರಳಬೇಕೆಂದು ಆಶಿಸಿದರು.