ನವದೆಹಲಿ: ಯೂಟ್ಯೂಬ್ ಭಾರತದಲ್ಲಿ ಪ್ರತಿ ಐವರ ಪೈಕಿ ನಾಲ್ವರ ಅತ್ಯಂತ ಮೆಚ್ಚಿನ ಆನ್ಲೈನ್ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಸ್ವತಃ ಯೂಟ್ಯೂಬ್ ಹೇಳಿಕೊಂಡಿದೆ. ಜೊತೆಗೆ ತನ್ನ ಶಾರ್ಟ್-ವಿಡಿಯೋ ಮೇಕಿಂಗ್ ಅಪ್ಲಿಕೇಶನ್ ಜನಪ್ರಿಯತೆ ಅಗಾಧವಾಗಿ ಬೆಳೆದಿದ್ದು, ದೇಶದಲ್ಲಿ 18 ರಿಂದ 44 ವರ್ಷ ವಯಸ್ಸಿನ 96 ಪ್ರತಿಶತದಷ್ಟು ಜನರು ಯೂಟ್ಯೂಬ್ ಶಾರ್ಟ್ಸ್ ಬಳಸುತ್ತಾರೆ ಎಂದು ಕಂಪನಿ ಬುಧವಾರ ಬಹಿರಂಗಪಡಿಸಿದೆ.
ಜಾಗತಿಕವಾಗಿ ಸರಾಸರಿ 70 ಬಿಲಿಯನ್ ದೈನಂದಿನ ವೀಕ್ಷಣೆ ಹೊಂದಿರುವ ಯೂಟ್ಯೂಬ್ ಶಾರ್ಟ್ಸ್ ಭಾರತದಲ್ಲೂ ಜನಪ್ರಿಯವಾಗುತ್ತಿದೆ. ಯೂಟ್ಯೂಬ್ ಶಾರ್ಟ್ಸ್ನ ಸರಾಸರಿ ದೈನಂದಿನ ವೀಕ್ಷಣೆಗಳು ಜಾಗತಿಕವಾಗಿ ವರ್ಷದಿಂದ ವರ್ಷಕ್ಕೆ (ವೈಒವೈ) ಶೇಕಡಾ 120 ಕ್ಕಿಂತ ಹೆಚ್ಚಾಗಿದೆ. ಕಳೆದ 12 ತಿಂಗಳುಗಳಲ್ಲಿ 18-44 ವರ್ಷ ವಯಸ್ಸಿನವರಲ್ಲಿ 88 ಪ್ರತಿಶತದಷ್ಟು ಜನರು ಟಿವಿಯಲ್ಲಿ ಶಾರ್ಟ್ ವೀಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ.
ಭಾರತದಲ್ಲಿನ ಆನ್ಲೈನ್ ಬಳಕೆದಾರರು ವಿವಿಧ ಸ್ವರೂಪದ ವೀಡಿಯೊಗಳನ್ನು ವೀಕ್ಷಿಸಲು ಸಮಯ ನೀಡುತ್ತಿದ್ದಾರೆ. ವೀಡಿಯೊ ವೀಕ್ಷಿಸುವವರು ಯಾವುದೇ ಒಂದು ಮಾದರಿಯ ವೀಡಿಯೊವನ್ನು ಶೇ 21ಕ್ಕಿಂತ ಹೆಚ್ಚು ಸಮಯ ವೀಕ್ಷಿಸುವುದಿಲ್ಲ ಎಂದು ಇಲ್ಲಿ ನಡೆದ 'ಯೂಟ್ಯೂಬ್ ಬ್ರಾಂಡ್ ಕಾಸ್ಟ್ 2023' ಕಾರ್ಯಕ್ರಮದಲ್ಲಿ ಕಂಪನಿ ತಿಳಿಸಿದೆ.
"ನಾವು ಭಾರತದಲ್ಲಿ ಯೂಟ್ಯೂಬ್ ಅನ್ನು ಪ್ರಾರಂಭಿಸಿದ 15 ವರ್ಷಗಳಲ್ಲಿ, ಸಂಪರ್ಕ ಮತ್ತು ಕಂಟೆಂಟ್ ವಿಷಯದಲ್ಲಿ ಅಸಾಧಾರಣ ಸರ್ವಾಂಗೀಣ ಡಿಜಿಟಲ್ ರೂಪಾಂತರ ಕಂಡುಬಂದಿದೆ ಮತ್ತು ಇಂದು ಜನ ತಮ್ಮ ಸ್ಮಾರ್ಟ್ ಫೋನ್ಗಳು ಮತ್ತು ತಮ್ಮ ಕನೆಕ್ಟೆಡ್ ಟಿವಿಗಳಲ್ಲಿ ಅಪರಿಮಿತವಾದ ವೀಕ್ಷಕ ಅನುಭವವನ್ನು ಸೃಷ್ಟಿಸಿದ್ದಾರೆ" ಎಂದು ಗೂಗಲ್ ಇಂಡಿಯಾದ ಮಾರ್ಕೆಟಿಂಗ್ ಪಾರ್ಟ್ನರ್ ವಿಭಾಗದ ನಿರ್ದೇಶಕ ಸತ್ಯ ರಾಘವನ್ ಹೇಳಿದರು.
ಡಿಜಿಟಲ್ ವೀಡಿಯೊ ಸೇವೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆ ಆನ್ಲೈನ್ ಭಾರತೀಯರು ಸರಾಸರಿ 5 ಕಂಟೆಂಟ್ ಪ್ಲಾಟ್ಫಾರ್ಮ್ಗಳಲ್ಲಿ ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ವೀಡಿಯೊ ವೀಕ್ಷಿಸಲು ಯೂಟ್ಯೂಬ್ ಮೆಚ್ಚಿನ ತಾಣವಾಗಿ ಹೊರಹೊಮ್ಮಿದೆ.
ಜೂನ್ 2022 ಕ್ಕೆ ಹೋಲಿಸಿದರೆ ಜೂನ್ 2023 ರಲ್ಲಿ ಭಾರತದಲ್ಲಿ ಚಾನೆಲ್ಗಳು ಯೂಟ್ಯೂಬ್ಗೆ ಅಪ್ಲೋಡ್ ಮಾಡಿದ ಒಟ್ಟು ವೀಡಿಯೊ ಅವಧಿ ಶೇಕಡಾ 40 ಕ್ಕಿಂತ ಹೆಚ್ಚಾಗಿದೆ. 35+ ವಯಸ್ಕರು ಈ ತಿಂಗಳಲ್ಲಿ ದಿನಕ್ಕೆ ಸರಾಸರಿ 70 ನಿಮಿಷಕ್ಕಿಂತ ಹೆಚ್ಚು ಕಾಲ ಯೂಟ್ಯೂಬ್ ಬಳಸಿದ್ದಾರೆ. ಕನೆಕ್ಟೆಡ್ ಟಿವಿ ಹೊಂದಿರುವ ಭಾರತದ ನಗರ ಪ್ರದೇಶಗಳ ಶೇ 33 ರಷ್ಟು ನಿವಾಸಿಗಳು ಈಗ ಸಾಂಪ್ರದಾಯಿಕ ಟಿವಿ ನೋಡುವುದಿಲ್ಲ. ಲಾಗ್-ಇನ್ ವೀಕ್ಷಕರು ದಿನಕ್ಕೆ ಸರಾಸರಿ 2.5 ಗಂಟೆಗಳ ಯೂಟ್ಯೂಬ್ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ : ಬ್ಯಾಂಕ್ ಲಾಕರ್ನಲ್ಲಿನ 18 ಲಕ್ಷ ರೂ. ತಿಂದು ಹಾಕಿದ ಗೆದ್ದಲು; ಮಹಿಳೆ ಕಂಗಾಲು!