ನವದೆಹಲಿ : ವಿಶ್ವದ ಯಾವುದೇ ಮೂಲೆಯಲ್ಲಿರುವ ಮೊಬೈಲ್ ಫೋನ್ ಬಳಕೆದಾರರನ್ನು ಪರಸ್ಪರ ಸಂಪರ್ಕಿಸಲು ಸಾಧ್ಯವಾಗಿಸುವ ಮೊದಲ ಬ್ಯಾಚಿನ ಉಪಗ್ರಹಗಳನ್ನು ಎಲೋನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಉಡಾವಣೆ ಮಾಡಿದೆ. ಈಗ ಉಡಾವಣೆಗೊಂಡ 21 ಹೊಸ ಸ್ಟಾರ್ಲಿಂಕ್ ಉಪಗ್ರಹಗಳ ಪೈಕಿ ಆರು 2022 ರಲ್ಲಿ ಕಂಪನಿ ಘೋಷಿಸಿದ ಹೊಸ 'ಡೈರೆಕ್ಟ್ ಟು ಸೆಲ್' (Direct to Cell) ಸೇವೆಯನ್ನು ಬೆಂಬಲಿಸಲಿವೆ.
'ಡೈರೆಕ್ಟ್ ಟು ಸೆಲ್' ಸಾಮರ್ಥ್ಯದೊಂದಿಗೆ ಈ ಮಿಷನ್ನಲ್ಲಿರುವ ಆರು ಸ್ಟಾರ್ಲಿಂಕ್ ಉಪಗ್ರಹಗಳು ಜಾಗತಿಕ ಸಂಪರ್ಕವನ್ನು ಮತ್ತಷ್ಟು ಉತ್ತಮಗೊಳಿಸಲಿವೆ ಮತ್ತು ಸಂಪರ್ಕ ರಹಿತ (ಡೆಡ್ ಝೋನ್) ವಲಯಗಳ ನಿವಾರಣೆಗೆ ಸಹಾಯ ಮಾಡುತ್ತವೆ ಎಂದು ಕಂಪನಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಅಮೆರಿಕದ ಟಿ-ಮೊಬೈಲ್ ನ 4G LTE ಕಂಪ್ಯಾಟಿಬಲ್ ಫೋನ್ಗಳ ಮೇಲೆ 'ಡೈರೆಕ್ಟ್ ಟು ಸೆಲ್' ಸಾಮರ್ಥ್ಯವನ್ನು ಪರೀಕ್ಷೆ ಮಾಡಲು ಸ್ಪೇಸ್ ಎಕ್ಸ್ಗೆ ಈ ಉಪಗ್ರಹಗಳು ಸಹಾಯ ಮಾಡಲಿವೆ. ಮುಂದಿನ ವರ್ಷ ಕೆಲ ದೇಶಗಳಲ್ಲಿ ಟೆಕ್ಸ್ಟ್ ಮೆಸೇಜ್ ಸೇವೆಯನ್ನು ಆರಂಭಿಸುವ ಮುನ್ನ ಈ ಪರೀಕ್ಷೆ ಅಗತ್ಯವಾಗಿದೆ.
ಹೆಚ್ಚಿನ ಡಿ 2 ಸಿ ಉಪಗ್ರಹಗಳು ಆನ್ ಲೈನ್ಗೆ ಬರುತ್ತಿದ್ದಂತೆಯೇ ಸ್ಪೇಸ್ ಎಕ್ಸ್ ಈ ಯೋಜನೆಗೆ 2025 ರ ನಂತರ ಧ್ವನಿ ಮತ್ತು ಡೇಟಾವನ್ನು (ಮತ್ತು ಐಒಟಿ ಸಾಧನಗಳನ್ನು) ಸೇರಿಸಲಿದೆ. "ಇದು ಭೂಮಿಯ ಮೇಲೆ ಯಾವುದೇ ಪ್ರದೇಶದಲ್ಲಾದರೂ ಮೊಬೈಲ್ ಫೋನ್ ಸಂಪರ್ಕಕ್ಕೆ ಅನುವು ಮಾಡಿಕೊಡುತ್ತದೆ" ಎಂದು ಎಲೋನ್ ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಗಮನಿಸಿ, ಇದು ಪ್ರತಿ ಬೀಮ್ಗೆ 7 ಎಂಎಂ ಅನ್ನು ಮಾತ್ರ ಬೆಂಬಲಿಸುತ್ತದೆ ಮತ್ತು ಬೀಮ್ಗಳು ತುಂಬಾ ದೊಡ್ಡದಾಗಿರುತ್ತವೆ. ಆದ್ದರಿಂದ ಸೆಲ್ಯುಲಾರ್ ಸಂಪರ್ಕವಿಲ್ಲದ ಸ್ಥಳಗಳಿಗೆ ಇದು ಉತ್ತಮ ಪರಿಹಾರವಾಗಿದ್ದರೂ, ಅಸ್ತಿತ್ವದಲ್ಲಿರುವ ಟೆರೆಸ್ಟ್ರಿಯಲ್ ಸೆಲ್ಯುಲಾರ್ ನೆಟ್ವರ್ಕ್ಗಳೊಂದಿಗೆ ಇದು ಅರ್ಥಪೂರ್ಣವಾಗಿ ಸ್ಪರ್ಧಾತ್ಮಕವಾಗಿಲ್ಲ" ಎಂದು ಮಸ್ಕ್ ಹೇಳಿದ್ದಾರೆ.
ಡೈರೆಕ್ಟ್ ಟು ಸೆಲ್ ಸಾಮರ್ಥ್ಯಗಳನ್ನು ಹೊಂದಿರುವ ಸ್ಟಾರ್ ಲಿಂಕ್ ಉಪಗ್ರಹಗಳು ಭೂಮಿ, ಸರೋವರಗಳು ಅಥವಾ ಕರಾವಳಿ ನೀರಿನಲ್ಲಿ ನೀವು ಎಲ್ಲಿದ್ದರೂ ಪಠ್ಯ, ಕರೆ ಮತ್ತು ಬ್ರೌಸಿಂಗ್ನ ಸೇವೆ ಬಳಸುವ ಸ್ವಾತಂತ್ರ್ಯ ನೀಡುತ್ತವೆ. ಡೈರೆಕ್ಟ್ ಟು ಸೆಲ್ ಐಒಟಿ ಸಾಧನಗಳನ್ನು ಸಾಮಾನ್ಯ ಎಲ್ಟಿಇ ಮಾನದಂಡಗಳೊಂದಿಗೆ ಸಂಪರ್ಕಿಸುತ್ತದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ : ಜಿಸ್ಯಾಟ್-20 ಉಡಾವಣೆಗೆ ಸ್ಪೇಸ್ಎಕ್ಸ್ನ ಫಾಲ್ಕನ್ ರಾಕೆಟ್ ಬಳಸಲಿದೆ ಇಸ್ರೊ