ನವದೆಹಲಿ : ಟ್ವಿಟರ್ ನಂತರ ಈಗ ಗೂಗಲ್ ಕೂಡ ಬ್ಲೂ ಟಿಕ್ ಮಾರ್ಕ್ ನೀಡುವ ಯೋಜನೆ ಪರಿಚಯಿಸಿದೆ. ಜಿಮೇಲ್ನಲ್ಲಿ ಮೇಲ್ ಕಳುಹಿಸುವವರ ಹೆಸರಿನ ಮುಂದೆ ನೀಲಿ ಟಿಕ್ ಮಾರ್ಕ್ ಕಾಣಿಸಿಕೊಳ್ಳಲಿದೆ. ಜಿಮೇಲ್ ಗ್ರಾಹಕರ ಗುರುತನ್ನು ಖಾತರಿಪಡಿಸಲು ಹಾಗೂ ಸ್ಪ್ಯಾಮ್ ಮೇಲ್ಗಳನ್ನು ತಡೆಗಟ್ಟಲು ಇದರಿಂದ ಸಹಾಯಕವಾಗಲಿದೆ ಎಂದು ಗೂಗಲ್ ಹೇಳಿದೆ. ಸದ್ಯಕ್ಕೆ ಈ ಸೌಲಭ್ಯ ಉಚಿತವಾಗಿರುತ್ತದೆ. 2021 ರಲ್ಲಿ ಕಂಪನಿಯು ಜಿಮೇಲ್ನಲ್ಲಿ ಸಂದೇಶಗಳನ್ನು ಗುರುತಿಸುವಿಕೆಗಾಗಿ (Brand Indicators for Message Identification -BIMI) ಬ್ರ್ಯಾಂಡ್ ಸೂಚಕಗಳನ್ನು ಮೊಟ್ಟ ಮೊದಲ ಬಾರಿಗೆ ಪರಿಚಯಿಸಿತ್ತು. ಇಮೇಲ್‌ಗಳಲ್ಲಿ ಬ್ರ್ಯಾಂಡ್ ಲೋಗೋವನ್ನು ಅವತಾರವಾಗಿ ಪ್ರದರ್ಶಿಸಲು ಕಳುಹಿಸುವವರು ಬಲವಾದ ದೃಢೀಕರಣವನ್ನು ಬಳಸುವ ಮತ್ತು ಅವರ ಬ್ರ್ಯಾಂಡ್ ಲೋಗೋವನ್ನು ಪರಿಶೀಲಿಸುವ ವೈಶಿಷ್ಟ್ಯ ಇದಾಗಿದೆ.
ಇದೇ ವೈಶಿಷ್ಟ್ಯದ ಮುಂದುವರಿದ ಭಾಗವಾಗಿ ಬಳಕೆದಾರರು ಈಗ BIMI ಅನ್ನು ಅಳವಡಿಸಿಕೊಂಡ ಸೆಂಡರ್ಗಳಿಗೆ ಚೆಕ್‌ಮಾರ್ಕ್ ಐಕನ್ ಕಾಣಿಸಲಿದೆ. ಇದು ಬಳಕೆದಾರರಿಗೆ ಅಸಲಿ ಸೆಂಡರ್ಸ್ ಮತ್ತು ನಕಲಿ ಸಂದೇಶಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವೈಶಿಷ್ಟ್ಯವನ್ನು ಈಗಾಗಲೇ ಜಾರಿ ಮಾಡಲಾಗಿದೆ. ಇದು ಎಲ್ಲಾ ಗೂಗಲ್ ವರ್ಕ್ಸ್ಪೇಸ್ ಗ್ರಾಹಕರಿಗೆ, ಹಾಗೆಯೇ ಲೆಗಸಿ ಜಿ ಸೂಟ್ ಬೇಸಿಕ್ ಮತ್ತು ಬಿಸಿನೆಸ್ ಗ್ರಾಹಕರಿಗೆ, ವೈಯಕ್ತಿಕ Google ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ ಲಭ್ಯವಿದೆ. BIMI ಅನ್ನು ಅಳವಡಿಸಿಕೊಂಡ ಕಂಪನಿಗಳು ಸ್ವಯಂಚಾಲಿತವಾಗಿ ಚೆಕ್‌ಮಾರ್ಕ್ ಅನ್ನು ಪಡೆಯಲಿವೆ.
ಬಲವಾದ ಇಮೇಲ್ ದೃಢೀಕರಣವು ಬಳಕೆದಾರರಿಗೆ ಮತ್ತು ಇಮೇಲ್ ಭದ್ರತಾ ವ್ಯವಸ್ಥೆಗಳಿಗೆ ಸ್ಪ್ಯಾಮ್ ಅನ್ನು ಗುರುತಿಸಲು ಮತ್ತು ಅವು ಸೆಂಡ್ ಆಗದಂತೆ ತಡೆಯಲು ಸಹಾಯ ಮಾಡುತ್ತದೆ. ಮೇಲ್ ಕಳುಹಿಸುವವರು ತಮ್ಮ ಬ್ರ್ಯಾಂಡ್ ಮೇಲಿನ ನಂಬಿಕೆಯನ್ನು ಉತ್ತಮಗೊಳಿಸಲು ಸಹಾಯ ಮಾಡಲಿದೆ ಎಂದು ಗೂಗಲ್ ಹೇಳಿದೆ. ಮತ್ತೊಂದೆಡೆ ಟ್ವಿಟರ್ನಲ್ಲಿದ್ದ ಎಲ್ಲ ಸಾಂಪ್ರದಾಯಿಕ ಬ್ಲೂ ಟಿಕ್ ಮಾರ್ಕ್ಗಳನ್ನು ಎಲೋನ್ ಮಸ್ಕ್ ತೆಗೆದು ಹಾಕಿದ್ದಾರೆ. ಟ್ವಿಟರ್ನಲ್ಲಿ ಬ್ಲೂಟಿಕ್ ಮಾರ್ಕ್ ಬೇಕಾದರೆ ವೈಯಕ್ತಿಕ ಬಳಕೆದಾರರು ತಿಂಗಳಿಗೆ 900 ರೂ (ವರ್ಷಕ್ಕೆ ರೂ 9,400) ಮತ್ತು ಸಂಸ್ಥೆಗಳು ಗೋಲ್ಡ್ ಟಿಕ್‌ಗಳಿಗಾಗಿ 1,000 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ.
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ಗಳಲ್ಲಿ ಕೂಡ ಪೇಡ್ ವೆರಿಫಿಕೇಶನ್ ಜಾರಿಗೆ ತರಲು ಮೆಟಾ ಸಿದ್ಧತೆ ನಡೆಸುತ್ತಿದೆ. ಇದನ್ನು ಪಡೆಯಲು ಗ್ರಾಹಕರು ವೆಬ್ಗೆ ಪ್ರತಿ ತಿಂಗಳಿಗೆ 11.99 ಡಾಲರ್ ಹಾಗೂ ಮೊಬೈಲ್ಗೆ 14.99 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ. ಮೆಟಾ ವೆರಿಫೈಡ್ ಖಾತೆಯು ಬಳಕೆದಾರರಿಗೆ ಪರಿಶೀಲಿಸಿದ ಬ್ಯಾಡ್ಜ್, ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿದ ಗೋಚರತೆ, ಆದ್ಯತೆಯ ಗ್ರಾಹಕ ಬೆಂಬಲ ಮತ್ತು ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡಲಿದೆ ಎಂದು ಮೆಟಾ ಸಿಇಓ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ. ಫೆಬ್ರವರಿಯಲ್ಲಿ ಈ ವೈಶಿಷ್ಟ್ಯವನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳಲ್ಲಿ ಪರಿಚಯಿಸಲಾಗಿದೆ. ಶೀಘ್ರದಲ್ಲೇ ಇದು ವಿಶ್ವದ ಇತರ ರಾಷ್ಟ್ರಗಳಲ್ಲಿ ಜಾರಿಗೆ ಬರಲಿದೆ.
ಇದನ್ನೂ ಓದಿ : ರಹಸ್ಯ ಮಾಹಿತಿ ಸೋರಿಕೆ:ಎಐ ಚಾಟ್ಜಿಪಿಟಿ ನಿರ್ಬಂಧಿಸಿದ ಸ್ಯಾಮ್ಸಂಗ್