ನವದೆಹಲಿ: ದೇಶದ ಚೊಚ್ಚಲ ಉಪಗ್ರಹ ಮಿಷನ್ ಮಂಗಳಯಾನದ ಕಾರ್ಯಾಚರಣೆ ಕೊನೆಗೊಂಡಿದೆ. ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ತರುವಾಯ ಅದರ ಬ್ಯಾಟರಿ ದೃಢತೆ, ಇಂಧನ ಖಾಲಿಯಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ತಿಳಿಸಿದೆ.
ಮಂಗಳ ಗ್ರಹದ ಅಂಗಳದ ಅಧ್ಯಯನಕ್ಕಾಗಿ 2013 ರಲ್ಲಿ ಉಡಾವಣೆ ಮಾಡಲಾದ ಮಾರ್ಸ್ ಆರ್ಬಿಟರ್ ಉಪಗ್ರಹ ತನ್ನ ಕೆಲಸವನ್ನು ನಿಲ್ಲಿಸಿದೆ. ಮತ್ತೆ ಅದನ್ನು ಮರಳಿ ಸ್ಥಾಪಿಸಲಾಗದು ಎಂದು ಇಸ್ರೋ ಅಧಿಕೃತ ಪ್ರಕಟಣೆ ತಿಳಿಸಿದೆ.
ಮಾರ್ಸ್ ಆರ್ಬಿಟರ್ ಮಿಷನ್ ಸೆಪ್ಟೆಂಬರ್ 27 ರಂದು ಮಂಗಳನ ಕಕ್ಷೆಯಲ್ಲಿ 8 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಇಸ್ರೋ "ಒಂದು ದಿನದ ರಾಷ್ಟ್ರೀಯ ಸಭೆ"ಯನ್ನು ಆಯೋಜಿಸಿತ್ತು. ಸಭೆಯಲ್ಲಿ ಇಂಧನ ಖಾಲಿಯಾಗಿದ್ದು, ಬ್ಯಾಟರಿಯಲ್ಲಿ ವಿದ್ಯುತ್ ಉತ್ಪಾದನೆ ದೃಢತೆ ಮುಗಿದ ಬಗ್ಗೆಯೂ ಪ್ರಸ್ತಾಪವಾಗಿತ್ತು.
ಮಂಗಳಯಾನ ಬಾಹ್ಯಾಕಾಶ ನೌಕೆ ಮತ್ತೆ ಪುನಃ ಸ್ಥಾಪಿಸಲು ಸಾಧ್ಯವಿಲ್ಲ. ಅದು ಅಂತ್ಯವನ್ನು ತಲುಪಿದೆ. ಈ ಮಿಷನ್ ಮಂಗಳಗ್ರಹದ ಪರಿಶೋಧನೆಯಲ್ಲಿ ಗಮನಾರ್ಹವಾದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಧನೆ ಮಾಡಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.
ಉಡಾವಣೆ ಆಗಿದ್ದು ಯಾವಾಗ: ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿದ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್ ಆರ್ಬಿಟರ್ ಅನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದಿತ್ತು. 2013 ರ ನವೆಂಬರ್ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ ರಾಕೆಟ್ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 2014 ರ ಸೆಪ್ಟೆಂಬರ್ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು.
ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ. ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿತ್ತು.
ಓದಿ: Nobel Prize for Medicine: ಸ್ವಾಂಟೆ ಪಾಬೊಗೆ ನೊಬೆಲ್ ಪ್ರಶಸ್ತಿ