ನವದೆಹಲಿ: ಪ್ರತಿ ನಿಮಿಷಕ್ಕೆ 1 ಲಕ್ಷ 42 ಸಾವಿರ ಡಾಲರ್ ಅಥವಾ ಗಂಟೆಗೆ 85 ಲಕ್ಷ ಡಾಲರ್ ಗಳಿಸುತ್ತಾರೆ ಎಂಬ ವರದಿಗಳನ್ನು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ತಳ್ಳಿ ಹಾಕಿದ್ದಾರೆ. ಇಂಥ ವರದಿಗಳೆಲ್ಲ ಕುಚೋದ್ಯದ ವರದಿಗಳಾಗಿದ್ದು, ಟೆಸ್ಲಾ ಷೇರು ಮೌಲ್ಯ ಕುಸಿದಾಗ ಗಳಿಸುವುದಕ್ಕಿಂತಲೂ ಹೆಚ್ಚು ಕಳೆದುಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಬಳಕೆದಾರರೊಬ್ಬರು ಮಾಡಿದ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಎಕ್ಸ್ ಮಾಲೀಕ ಮಸ್ಕ್, ನನ್ನ ಬಳಿ ರಾಶಿ ರಾಶಿ ಹಣದ ಕಂತೆಗಳಿಲ್ಲ, ಕಂಪನಿಗಳನ್ನು ಆರಂಭಿಸುವಾಗ ಅವುಗಳಲ್ಲಿ ನಾನು ವಹಿಸಿದ ಪಾತ್ರಕ್ಕಾಗಿ ಷೇರುಗಳನ್ನು ಹೊಂದಿದ್ದೇನೆ ಅಷ್ಟೇ ಎಂದು ತಿಳಿಸಿದ್ದಾರೆ.
ತಾಂತ್ರಿಕವಾಗಿ ನೋಡುವುದಾದರೆ ಟೆಸ್ಲಾ ಷೇರು ಮೌಲ್ಯ ಕುಸಿದಾಗಲೆಲ್ಲ ನಾನು ಕಳೆದುಕೊಳ್ಳುವುದೇ ಹೆಚ್ಚು ಎಂದು ಅವರು ಉತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಸ್ಕ್ ಅವರ ಸಂಪತ್ತು ಪ್ರತಿ ಸೆಕೆಂಡಿಗೆ ಸರಾಸರಿ 2,378 ಡಾಲರ್ನಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ತಿಳಿಸಿತ್ತು. "ಅವರು ನಿಮಿಷಕ್ಕೆ 1,42,680 ಅಥವಾ ಗಂಟೆಗೆ 8,560,800 ಡಾಲರ್ ಆದಾಯ ಗಳಿಸುತ್ತಿದ್ದಾರೆ. ಮಸ್ಕ್ ಎಂಟು ಗಂಟೆಗಳ ಕಾಲ ಮಲಗಿ ಮರುದಿನ ಬೆಳಗ್ಗೆ ಎಚ್ಚರಗೊಂಡಾಗ ಅವರು 68,486,400 ಡಾಲರ್ ಶ್ರೀಮಂತರಾಗಿರುತ್ತಾರೆ" ಎಂದು ವರದಿ ಹೇಳಿದೆ.
ಮಸ್ಕ್ ಅವರ ಸಂಪತ್ತಿನ ನಿವ್ವಳ ಮೌಲ್ಯವು 2023 ರ ಜನವರಿಯಿಂದ ಜೂನ್ವರೆಗೆ 96.6 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಪ್ರಸ್ತುತ 248.7 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ವಿಶೇಷವೆಂದರೆ ಮಸ್ಕ್ ಅವರ ಸಂಪತ್ತಿನ ಶೇಕಡಾ 23 ರಷ್ಟು ಟೆಸ್ಲಾದಲ್ಲಿನ ಅವರ ಷೇರಿಗೆ ಸಂಬಂಧಿಸಿದೆ.
ಅಕ್ಟೋಬರ್ 2022 ರಲ್ಲಿ, ಮಸ್ಕ್ ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗೆ ಖರೀದಿಸುವ ಮೂಲಕ ಸುದ್ದಿಯಾಗಿದ್ದರು. ಆದಾಗ್ಯೂ, ಈ ವರ್ಷದ ಆರಂಭದಲ್ಲಿ, ಅವರು 13 ತಿಂಗಳಲ್ಲಿ 200 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಕಳೆದುಕೊಂಡ ಮೊದಲ ವ್ಯಕ್ತಿಯಾಗಿದ್ದಾರೆ. ಟೆಸ್ಲಾ ಷೇರುಗಳಲ್ಲಿ ಗಮನಾರ್ಹ ಕುಸಿತದ ನಂತರ ಅವರ ಸಂಪತ್ತು 137 ಬಿಲಿಯನ್ ಡಾಲರ್ಗೆ ಇಳಿದಿದೆ. ಅಂದರೆ ಅವರ ಸಂಪತ್ತಿನ ಮೌಲ್ಯದಲ್ಲಿ ಸುಮಾರು 65 ಪ್ರತಿಶತದಷ್ಟು ಕುಸಿತವಾಗಿದೆ.
ಈ ಹೇಳಿಕೆಯು ಮಸ್ಕ್ ಅವರ ಸಂಪತ್ತಿನ ಚಂಚಲತೆಯನ್ನು ಒತ್ತಿಹೇಳುತ್ತದೆ. ಅವರ ಸಂಪತ್ತಿನ ಮೌಲ್ಯವು ಮುಖ್ಯವಾಗಿ ಟೆಸ್ಲಾದಲ್ಲಿನ ಗಮನಾರ್ಹ ಷೇರು ಪಾಲು ಮತ್ತು ಷೇರು ಮೌಲ್ಯದ ಏರಿಳಿತಗಳ ಮೇಲೆ ಆಧರಿತವಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ.
ಇದನ್ನೂ ಓದಿ : ವರ್ಕ್ ಫ್ರಂ ಹೋಮ್ ನಿಲ್ಲಿಸಿದ ಟಿಸಿಎಸ್; ಅ.1 ರಿಂದ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ