ಪಲ್ನಾಡು (ಆಂಧ್ರಪ್ರದೇಶ): ನಾವು ಮನಸ್ಸು ಮಾಡಿದರೆ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಸಿಗುತ್ತದೆ. ವಿಭಿನ್ನ ಆಲೋಚನೆಗಳು ಆವಿಷ್ಕಾರಗಳಿಗೆ ಕಾರಣವಾಗುತ್ತವೆ ಎಂದು ಹೇಳಲಾಗುತ್ತದೆ. ಅದರಂತೆ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಪಿಡುಗುರಲ್ಲ ನಿವಾಸಿ ಶೇಖ್ ಮಸ್ತಾನ್ ವಾಲಿ ಹೊಸ ಆವಿಷ್ಕಾರವೊಂದನ್ನು ಮಾಡಿದ್ದಾರೆ. ಶೇಖ್ ಮಸ್ತಾನ್ ವಾಲಿ ಸೌರಶಕ್ತಿಯಿಂದ ಚಲಿಸುವ ಬೈಕ್ ವಿನ್ಯಾಸಗೊಳಿಸಿದ್ದಾರೆ. ಅವರ ಈ ಹೈಬ್ರಿಡ್ ಬೈಕ್ಗೆ ಒಂದು ಪೈಸೆಯನ್ನೂ ಖರ್ಚು ಮಾಡಬೇಕಾದ ಅಗತ್ಯವಿಲ್ಲದೆ ಪ್ರಯಾಣಿಸಬಹುದು. ಹಾಗಾದರೆ ಈ ಹೈಬ್ರಿಡ್ ಬೈಕ್ನ ವಿಶೇಷತೆ ನೋಡೋಣ.
ಸದ್ಯ ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಶೇಖ್ ಮಸ್ತಾನ್ ವಾಲಿ ಸೌರಶಕ್ತಿ ಚಾಲಿತ ಬೈಕ್ ತಯಾರಿಸಿದ್ದಾರೆ. ಈ ಬೈಕಿನ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದ್ದಾರೆ, ಇದು ಮಳೆ ಮತ್ತು ಬಿಸಿಲಿನಿಂದಲೂ ರಕ್ಷಣೆ ನೀಡುತ್ತದೆ. ಅವರು ಈ ಬೈಕ್ ಅನ್ನು ಸಾಮಾನ್ಯ ಬೈಕನ್ನೇ ಮಾರ್ಪಡಿಸಿ ತಯಾರಿಸಿದ್ದಾರೆ, ಈ ಬೈಕ್ನಲ್ಲಿ ಬ್ಯಾಟರಿಯನ್ನು ಬಳಸಲಾಗಿದೆ. ಈ ಹೈಬ್ರಿಡ್ ಬೈಕ್ ತಯಾರಿಗೆ 1 ಲಕ್ಷದ 30 ಸಾವಿರ ಖರ್ಚಾಗಿದ್ದು, ಸಾಮಾನ್ಯ ಬೈಕ್ ಉಳ್ಳವರು ಹೈಬ್ರಿಡ್ ಬೈಕ್ ಆಗಿ ಮಾರ್ಪಡಿಸಿಕೊಳ್ಳಲು 30ಸಾವಿರ ಖರ್ಚಾಗುತ್ತೆ ಎನ್ನುತ್ತಾರೆ ಶೇಖ್ ಮಸ್ತಾನ್ ವಾಲಿ.
ಸೋಲಾರ್ ಮತ್ತು ಬ್ಯಾಟರಿ ಸಹಾಯದಿಂದ ಹೈಬ್ರಿಡ್ ಬೈಕ್ ತಯಾರಿ: ಶೇಖ್ ಮಸ್ತಾನ್ ವಾಲಿ ಅವರು ವಾಹನಗಳನ್ನು ರಿಪೇರಿ ಮತ್ತು ಡಿಸೈನ್ ಮಾಡುವ ಮೂಲಕ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಸದ್ಯ ಇವರು ಸೋಲಾರ್ ಮತ್ತು ಬ್ಯಾಟರಿ ಸಹಾಯದಿಂದ ಹೈಬ್ರಿಡ್ ಬೈಕ್ ತಯಾರಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಈ ಆವಿಷ್ಕಾರದ ಹಿಂದೆ ಒಂದು ಕಲ್ಪನೆ ಇದೆ ಎಂದು ಅವರು ಹೇಳುತ್ತಾರೆ. ಹಣದುಬ್ಬರದ ಈ ಯುಗದಲ್ಲಿ ಪೆಟ್ರೋಲ್ ಬೆಲೆಯನ್ನು ಭರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೆಟ್ರೋಲ್ನ ಅವಶ್ಯಕತೆ ಇಲ್ಲದ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ.
ತಂದೆಗೆ ಮಗನಿಂದ ನೆರವು: ಅನಕ್ಷರಸ್ಥನಾಗಿರುವ ಶೇಖ್ ಮಸ್ತಾನ್ ವಾಲಿಗೆ ಡಿಪ್ಲೋಮಾ ಮಾಡಿರುವ ಮಗ ಸುಭಾನಿ ಹೈಬ್ರಿಡ್ ಬೈಕ್ ತಯಾರಿಗೆ ಅಗತ್ಯವಿರುವ ವಸ್ತುಗಳ ಬಗ್ಗೆ ತಂದೆಗೆ ಮಾಹಿತಿ ನೀಡಿ. ಬೇಕಾಗಿರುವ ವಸ್ತುಗಳನ್ನು ಆನ್ಲೈನ್ ಮೂಲಕ ತರಿಕೊಡುತ್ತಾರೆ, ಯಾವ ವಸ್ತುಗಳನ್ನು ಹೇಗೆ ಬಳಸಬೇಕು ಎಂದು ತಿಳಿದ ನಂತರ ಶೇಖ್ ಮಸ್ತಾನ್ ವಾಲಿ ಅವುಗಳನ್ನು ಬಳಸಿಕೊಂಡು ಕ್ರಮ ಬದ್ದವಾಗಿ ಬೈಕ್ ನಿರ್ಮಿಸಿದ್ದಾರೆ.
ನಾಲ್ವರು ಪ್ರಯಾಣಿಸಬಹುದಾದ ಬೈಕ್: ಹಗಲಿನಲ್ಲಿ ಸೂರ್ಯನ ಬೆಳಕಿನಲ್ಲಿ ಬೈಕ್ ಓಡುತ್ತದೆ ಎಂದು ಶೇಖ್ ಮಸ್ತಾನ್ ವಾಲಿ ಹೇಳಿದ್ದಾರೆ. ಎರಡು ಗಂಟೆ ಚಾರ್ಜ್ ಮಾಡಿದರೆ ಸುಮಾರು 80 ಕಿಲೋಮೀಟರ್ ಪ್ರಯಾಣಿಸುವಂತೆ ಈ ಬೈಕ್ ವಿನ್ಯಾಸ ಮಾಡಿದ್ದಾರೆ. ನಾಲ್ವರು ಪ್ರಯಾಣಿಸಲು ಈ ಬೈಕ್ ತಯಾರಿಸಲಾಗಿದೆ. ಶೇಖ್ ಮಸ್ತಾನ್ ವಾಲಿ ಶಿಕ್ಷಣ ಪಡೆಯದಿದ್ದರೂ ಬುದ್ಧಿವಂತಿಕೆ ಹಾಗೂ ಪರಿಶ್ರಮದಿಂದ ಹೊಸ ಹೈಬ್ರಿಡ್ ಬೈಕ್ ತಯಾರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.