ಹೈದರಾಬಾದ್: ಇಲ್ಲಿನ ಸಿಬಿಐಟಿಯ ಪ್ರಾಧ್ಯಾಪಕರು ಸ್ಕ್ಯಾನಿಂಗ್ ಅಗತ್ಯವಿಲ್ಲದೇ ತಾಳೆ ಎಲೆಗಳಲ್ಲಿನ ಮಾಹಿತಿಯನ್ನು 3ಡಿ ಮಾದರಿಯಲ್ಲಿ ಸಂಗ್ರಹಿಸುವ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಕೇಂದ್ರ ಸರ್ಕಾರ ಇದಕ್ಕೆ ಪೇಟೆಂಟ್ ಕೂಡ ನೀಡಿದೆ. ನಾಡಿನ ಸಾಹಿತ್ಯ, ಅಧ್ಯಾತ್ಮ, ವೈದ್ಯ, ಸಂಗೀತ, ಜ್ಯೋತಿಷ್ಯ, ಶಿಲ್ಪಕಲೆಗಳಿಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಳನ್ನು ತಾಳೆಗರಿಯಲ್ಲಿ ಸಂಗ್ರಹಿಸಲಾಗಿದೆ.
ಇದೆಲ್ಲವೂ ತಾಳೆ ಎಲೆಗಳ ಮೇಲೆ ಬರೆಯಲ್ಪಟ್ಟಿದ್ದು, ಆ ತಾಳೆ ಎಲೆಗಳನ್ನು ಬಹಳ ಕಾಲದವರೆಗೆ ಸಂರಕ್ಷಿಸುವುದು ಕಷ್ಟವಾಗುತ್ತಿದೆ. ತಾಳೆ ಎಲೆ ಮೇಲೆ ಬರೆದ ಅಕ್ಷರಗಳು ಮಸುಕಾಗುತ್ತವೆ ಮತ್ತು ಎಲೆಗಳು ಹರಿದು ಅಕ್ಷರಗಳು ಕಾಣದಂತಾಗುತ್ತವೆ. ಈ ಮಾಹಿತಿಯನ್ನು ಉಳಿಸಲು ತಾಳೆ ಎಲೆಗಳನ್ನು ಸ್ಕ್ಯಾನ್ ಮಾಡಿ ಗಣಕೀಕರಣಗೊಳಿಸುವ ತಂತ್ರವನ್ನು ಈವರೆಗೆ ಅನುಸರಿಸಿಕೊಂಡು ಬರಲಾಗುತ್ತಿದೆ.
ಇಷ್ಟೆಲ್ಲ ಮಾಡಿದರೂ ಕೆಲವೊಮ್ಮೆ ಅಕ್ಷರಗಳು ಕಾಣುವುದಿಲ್ಲ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) 2013-16ರ ನಡುವೆ ಈ ತೊಂದರೆಗಳನ್ನು ನಿವಾರಿಸಲು, ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲು ಸಿಬಿಐಟಿ ಪ್ರೊಫೆಸರ್ ಪಿ.ನರಹರಿ ಶಾಸ್ತ್ರಿ ಅವರಿಗೆ ವಿಶೇಷ ಯೋಜನೆಯಡಿ 7.31 ಲಕ್ಷ ರೂಪಾಯಿಗಳ ಅನುದಾನ ನೀಡಿದೆ.
ಈ ಹಿನ್ನೆಲೆಯಲ್ಲಿ ತಾಳೆ ಎಲೆಗಳಲ್ಲಿರುವ ಮಾಹಿತಿಯನ್ನು ಟೆಫ್ಲಾನ್ ಆಧಾರಿತ ಸೂಜಿಯ ಸಹಾಯದಿಂದ ಸ್ಕ್ಯಾನ್ ಮಾಡಿ 3ಡಿ ಮಾದರಿಯಲ್ಲಿ ಕಂಪ್ಯೂಟರೀಕರಣ ಮಾಡುವ ತಂತ್ರಜ್ಞಾನವೊಂದನ್ನು ಪ್ರೊಫೆಸರ್ ಪಿ.ನರಹರಿ ಶಾಸ್ತ್ರಿ ರೂಪಿಸಿದ್ದಾರೆ. ಈ ಕಾರಣದಿಂದಾಗಿ, ತಾಳೆ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ.
ಶೇ 90 ರಷ್ಟು ನಿಖರತೆ: ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (machine learning)ಯ ಸಹಾಯದಿಂದ ದಾಖಲೆಗಳ ಮಾಹಿತಿಯನ್ನು ಶೇಕಡಾ 90 ರಷ್ಟು ನಿಖರತೆಯೊಂದಿಗೆ ಗಣಕೀಕರಿಸಬಹುದು. ಯಾವುದೇ ದಾಖಲೆ ಹಾಳಾಗಿದ್ದರೂ ಅದನ್ನು ಪುನರ್ ನಿರ್ಮಾಣ ಮಾಡಬಹುದು ಎಂದು ಪ್ರೊ.ನರಹರಿ ಶಾಸ್ತ್ರಿ ವಿವರಿಸಿದರು. ಮತ್ತೋರ್ವ ಪ್ರಾಧ್ಯಾಪಕ ಎನ್.ವಿ.ಕೋಟೇಶ್ವರ ರಾವ್ ಮತ್ತು ಇಸ್ರೋ ವಿಜ್ಞಾನಿ ರಾಮಕೃಷ್ಣ ಕೃಷ್ಣನ್ ಈ ತಂತ್ರಜ್ಞಾನದ ತಯಾರಿಗೆ ಸಹಕರಿಸಿದ್ದಾರೆ. ಕಳೆದ ತಿಂಗಳು ಈ ತಂತ್ರಜ್ಞಾನಕ್ಕೆ ಪೇಟೆಂಟ್ ಮಂಜೂರಾಗಿದ್ದು, ಸೋಮವಾರ ಸೈಬರಾಬಾದ್ ಕಮಿಷನರೇಟ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಂತ್ರಜ್ಞಾನದ ಮಾದರಿಯನ್ನು ಪ್ರದರ್ಶಿಸಲಾಯಿತು.
ಮಾನವ ಹಸ್ತಕ್ಷೇಪ ಇಲ್ಲದೇ ಬೆಳೆಗಳಿಗೆ ಔಷಧ: ಸಿಬಿಐಟಿ ಪ್ರಾಧ್ಯಾಪಕರು ಮಾನವ ಹಸ್ತಕ್ಷೇಪವಿಲ್ಲದೇ ಬೆಳೆಗಳಿಗೆ ಔಷಧ ಸಿಂಪಡಿಸುವ ತಂತ್ರದ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ. ಕಾಲೇಜಿನ ಆರ್ ಆ್ಯಂಡ್ ಡಿ ಮುಖ್ಯಸ್ಥ ಉಮಾಕಾಂತ್ ಚೌಧರಿ, ಪ್ರೊ.ನರಹರಿ ಶಾಸ್ತ್ರಿ, ಜಿ.ಮಲ್ಲಿಕಾರ್ಜುನ ರಾವ್ ಅವರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳಾದ ಜಿ.ಚರಿತ್ ರೆಡ್ಡಿ, ಎ.ಗಣೇಶ್, ಮತ್ತು ಎ.ಸೈವಂಶಿ ಈ ತಂತ್ರಜ್ಞಾನದ ತಯಾರಿಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಇದು ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದು, ಪೂರ್ಣ ಪ್ರಮಾಣದ ಉತ್ಪಾದನೆಗೆ ಒತ್ತು ನೀಡುತ್ತಿದ್ದೇವೆ ಎಂದು ಉಮಾಕಾಂತ್ ವಿವರಿಸಿದರು.
ಇದನ್ನು ಓದಿ:ಭಾರತದ ಮೊದಲ 3D ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿಪಡಿಸಿದ ಹೈದರಾಬಾದ್ ವಿಜ್ಞಾನಿಗಳು