ನವದೆಹಲಿ: ಗೋವಿನ ಸಗಣಿಯಿಂದ ತಯಾರಿಸಿದ 'ಚಿಪ್' ಅನ್ನು ರಾಷ್ಟ್ರೀಯ ಕಾಮಧೇನು ಆಯೋಗ (ಆರ್‌ಕೆಎ) ಅನಾವರಣಗೊಳಿಸಿದ್ದು, ಇದು ಮೊಬೈಲ್ ಫೋನ್ಗಳ ವಿಕಿರಣವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ.
ಚಿಪ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಆರ್‌ಕೆಎ ಅಧ್ಯಕ್ಷ ವಲ್ಲಭಭಾಯ್ ಕಥಿರಿಯಾ, ಈ ಚಿಪ್ ಅನ್ನು ಹಸುವಿನ ಸಗಣಿಯಿಂದ ತಯಾರಿಸಲಾಗಿದ್ದು, ಮೊಬೈಲ್ಗಳಲ್ಲಿನ ರೇಡಿಯೇಷನ್ ಕಡಿಮೆ ಮಾಡುತ್ತದೆ. ಹಸುವಿನ ಸಗಣಿ ಎಲ್ಲರನ್ನೂ ರಕ್ಷಿಸುತ್ತದೆ, ಇದು ವಿಕಿರಣ ನಿಯಂತ್ರಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೇ ಇದಕ್ಕೆ ರೋಗಗಳನ್ನು ತಡೆಯುವ ಶಕ್ತಿ ಕೂಡ ಇದೆ ಎಂದು ಹೇಳಿದರು.
'ಗೋಸತ್ವ ಕವಚ' ಎಂಬ ಹೆಸರಿನ ಈ ಚಿಪ್ ಅನ್ನು ಗುಜರಾತ್ನ ರಾಜ್‌ಕೋಟ್ ಮೂಲದ ಶ್ರೀಜಿ ಗೋಶಾಲೆ ತಯಾರಿಸಿದೆ. ಹಸುವಿನ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ 'ಕಾಮಧೇನು ದೀಪಾವಳಿ ಅಭಿಯಾನ'ವನ್ನು ಕೂಡ ಕಾಮಧೇನು ಆಯೋಗವು ಪ್ರಾರಂಭಿಸುವುದಾಗಿ ವಲ್ಲಭಭಾಯ್ ತಿಳಿಸಿದ್ದಾರೆ.
ರಾಷ್ಟ್ರೀಯ ಕಾಮಧೇನು ಆಯೋಗ:
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ 2019ರಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪನೆ ಮಾಡಲಾಗಿದೆ. ಹಸುಗಳ ಸಂರಕ್ಷಣೆ, ರಕ್ಷಣೆ, ಅಭಿವೃದ್ಧಿ ಈ ಆಯೋಗದ ಗುರಿಯಾಗಿದೆ. ಇದು ಹಬ್ಬಗಳ ಸಂದರ್ಭದಲ್ಲಿ ಹಸುವಿನ ಉತ್ಪನ್ನಗಳನ್ನು ಜನರು ಹೆಚ್ಚೆಚ್ಚು ಬಳಸುವುದನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುತ್ತದೆ.
ಕಾಮಧೇನು ಆಯೋಗದ ಈ ಅಭಿಯಾನವು ಪ್ರಧಾನಿ ನರೇಂದ್ರ ಮೋದಿಯವರ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆ ಹಾಗೂ 'ಸ್ವದೇಶಿ ಆಂದೋಲನ'ಕ್ಕೂ ಉತ್ತೇಜನ ನೀಡುತ್ತದೆ ಎಂದು ಹೇಳುತ್ತಾರೆ ವಲ್ಲಭಭಾಯ್.