ಬೆಳಗಾವಿ: ಲಾಕ್‌ಡೌನ್ ನಂತರ ಗ್ರಾಮೀಣ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಕೊರೊನಾ ಹೊಡೆತ ಮತ್ತು ಪ್ರವಾಹದಿಂದ ಈಗಷ್ಟೇ ಚೇತರಿಕೆ ಕಾಣುತ್ತಿದ್ದ ಅದೆಷ್ಟೋ ಕುಟುಂಬಗಳು ಇದೀಗ ಕಳ್ಳಕಾಕರ ಕೈಚಳಕಕ್ಕೆ ಕಂಗಾಲಾಗಿವೆ.
ಗಡಿ ಜಿಲ್ಲೆ ಬೆಳಗಾವಿಯ ಕಾಗವಾಡ, ಅಥಣಿ, ಚಿಕ್ಕೋಡಿ ಹಾಗೂ ಕಿತ್ತೂರು ತಾಲೂಕುಗಳಲ್ಲಿ ಮನೆ, ಅಂಗಡಿಗಳು ಹಾಗೂ ದೇವಸ್ಥಾನ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳತನ ಪ್ರಕರಣಗಳನ್ನು ತಡೆಯಲು ಈಗಾಗಲೇ ಪೊಲೀಸ್ ಇಲಾಖೆಯಿಂದ ಡಂಗೂರ ಸಾರಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಆದ್ರೆ ಸಾರ್ವಜನಿಕರು ಎಷ್ಟೇ ಎಚ್ಚರಿಕೆ ವಹಿಸಿ ತಮ್ಮ ಮನೆಯಲ್ಲಿ ಹಣ, ಚಿನ್ನಾಭರಣಗಳನ್ನು ಬಚ್ಚಿಟ್ಟರೂ ಕಳ್ಳರು ಕ್ಷಣಾರ್ಧದಲ್ಲಿ ಎಗರಿಸಿಬಿಡುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಬೆಲೆ ಬಾಳುವ ವಸ್ತುಗಳನ್ನು ಹಾಗೂ ದೊಡ್ಡ ಮೊತ್ತದ ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇರಿಸುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.
ಓದಿ-ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿ ಘೋಷಿಸಿದ ಕೇಂದ್ರ ಸರ್ಕಾರ
ಸಂಕಷ್ಟದ ಮೇಲೆ ಸಂಕಷ್ಟ
ಕಳೆದ ವರ್ಷದ ಪ್ರವಾಹ ಮತ್ತು ಲಾಕ್ಡೌನ್ನಿಂದ ತೊಂದರೆಗೆ ಸಿಲುಕಿಕೊಂಡಿದ್ದ ಜನರ ಪರಿಸ್ಥಿತಿ ಸುಧಾರಣೆ ಕಾಣುತ್ತಿರುವಾಗ ಗ್ರಾಮೀಣ ಭಾಗದಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದ್ದ ಹಣ ಮತ್ತು ಒಡವೆ ಖದೀಮರ ಕೈಚಳಕದಿಂದ ನಾಪತ್ತೆಯಾಗುತ್ತಿವೆ. ಎಲ್ಲವೂ ಸರಿಯಾಗುತ್ತಿದೆ ಎನ್ನುವಷ್ಟರಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿರೋದು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಗ್ರಾಮ ಪಂಚಾಯತ್‌ಗಳೇ ಸಿಸಿಟಿವಿ ಕ್ಯಾಮರಾ ಅಳವಡಿಸಲಿ
ನಗರ ಪ್ರದೇಶದಲ್ಲಿ ಸ್ಥಿತಿವಂತರು ತಮ್ಮ ತಮ್ಮ ಮನೆಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಹಾಕಿಕೊಂಡು ಸುರಕ್ಷಿತವಾಗಿರುತ್ತಾರೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ರೈತರೇ ಹೆಚ್ಚಾಗಿ ವಾಸಿಸುವುದರಿಂದ ಮನೆಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕಷ್ಟವಾಗಲಿದೆ. ಈ ಸಂಬಂಧ ಗ್ರಾಮ ಪಂಚಾಯತ್‌ಗಳು ಕ್ರಮ ಕೈಗೊಂಡು ಪ್ರಮುಖ ರಸ್ತೆಗಳಲ್ಲಿಯಾದರೂ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎನ್ನುವುದು ಹಳ್ಳಿಗರ ಮಾತು.
ಡಂಗೂರ ಸಾರಿ ಕಳ್ಳತನ ತಡೆಗೆ ಮುಂದಾದ ಪೊಲೀಸರು
ಇತೀಚೆಗೆ ಅಥಣಿ, ಚಿಕ್ಕೋಡಿ, ನಿಪ್ಪಾಣಿ ಹಾಗೂ ಕಿತ್ತೂರಿನಲ್ಲಿ ದೇವಸ್ಥಾನ, ಮನೆಗಳು ಹಾಗೂ ಅಂಗಡಿಗಳ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಡಂಗೂರ ಸಾರಿ ಜನಜಾಗೃತಿ ಮೂಡಿಸಲಾಗುತ್ತಿದೆ. ಪೊಲೀಸರು ಡಂಗೂರ ಸಾರಿದ ದಿನದಿಂದ ಇಲ್ಲಿಯವರೆಗೂ ಯಾವುದೇ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಆದ್ರೂ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.
ಗ್ರಾಮೀಣ ಪ್ರದೇಶಗಳೇ ಟಾರ್ಗೆಟ್
ಜಮೀನಿನಲ್ಲಿ ಕೆಲಸ ಮಾಡಿ ದಣಿದು ಬರುವ ರೈತಾಪಿ ವರ್ಗ ಮತ್ತು ಕೂಲಿ ಕಾರ್ಮಿಕರನ್ನೇ ಟಾರ್ಗೆಟ್ ಮಾಡುವ ಖದೀಮರು, ರಾತ್ರಿ ಹೊತ್ತು ಕನ್ನ ಹಾಕಿ ಕೈಚಳಕ ತೋರುತ್ತಿದ್ದಾರೆ. ಅದಕ್ಕಾಗಿ ಜನರು ಮನೆಗಳಿಗೆ ಗಟ್ಟಿಯಾದ ಬೀಗ ಹಾಕಿ ಕೀಗಳನ್ನು ಮನೆ ಮುಂದೆ ಇಡದೆ ತೆಗೆದುಕೊಂಡು ಹೋಗಬೇಕು. ಬೆಲೆ ಬಾಳುವ ವಸ್ತುಗಳು ಮತ್ತು ಹಣವನ್ನು ಹಾಗೂ ಇನ್ಸೂರೆನ್ಸ್ ಪಾಲಿಸಿಗಳನ್ನು ಬ್ಯಾಂಕ್ ಸೇಫ್ ಲಾಕರ್ಗಳಲ್ಲಿ ಇಡಬೇಕು. ಅಪರಿಚಿತರು ಕಂಡುಬಂದ್ರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಕಳ್ಳತನ ತಡೆಗಟ್ಟಲು ಸಹಾಯವಾಗುತ್ತದೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಜನರಿಗೆ ಸೂಚನೆ ನೀಡುತ್ತಾರೆ.