ಬೆಳಗಾವಿ: ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಬರ್ಬರ ಹತ್ಯೆ ಮಾಡಿದ ಆರೋಪಿಗಳ ಶೋಧಕ್ಕೆ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಆಸ್ತಿ ವಿವಾದವೇ ಕೊಲೆಗೆ ಮುಖ್ಯ ಕಾರಣವೆಂದು ಮೃತ ಮಹಮದ್ ಹುಸೇನ್ ಬಹೂದ್ಧರ್ ಶೇಖ್ ತಾಯಿ ಬೈಲಹೊಂಗಲ ಠಾಣೆಗೆ ದೂರು ನೀಡಿದ್ದರು. ತಿಗಡಿ ಗ್ರಾಮದ ಅರ್ಜುನವ್ವ ನೀಲಗುಂದ, ಅದೃಶಪ್ಪ ನೀಲಗುಂದ, ಮಹಾಂತೇಶ ನೀಲಗುಂದ ಹಾಗೂ ನಿಂಗವ್ವ ನೀಲಗುಂದ ಕೊಲೆಯ ಪ್ರಮುಖ ಆರೋಪಿಗಳಾಗಿದ್ದು, ಘಟನೆ ಬಳಿಕ ಪರಾರಿಯಾಗಿದ್ದರು. ಮಹಮದ್ ಹುಸೇನ್ ತನ್ನ ಪಾಲಿನ 2 ಎಕರೆ 22 ಗುಂಟೆ ಜಮೀನನ್ನು ಬೇರೆಯವರಿಗೆ ಉಳುಮೆ ಮಾಡಲು ನೀಡಿದ್ದರು. ಅದರಲ್ಲಿ 1 ಎಕರೆ 22 ಗುಂಟೆ ಕೃಷಿ ಭೂಮಿ ಹಾಗೂ ಇನ್ನುಳಿದಿದ್ದು ಪಾಳು ಭೂಮಿಯಾಗಿದೆ. ಪಾಳುಬಿದ್ದ ಭೂಮಿಯ ಹುಲ್ಲನ್ನು ಆರೋಪಿತರು ಕಟಾವು ಮಾಡುತ್ತಿದ್ದರು. ಇದನ್ನು ಮುಕ್ತುಂ ಹುಸೇನ್ ಪ್ರಶ್ನಿಸಿದಾಗ ಎರಡೂ ಗುಂಪುಗಳ ಮಧ್ಯೆ ವಾಗ್ವದ ವಿಕೋಪಕ್ಕೆ ತಿರುಗಿದೆ. ಆರೋಪಿತರು ಕೊಡಲಿ ಯಿಂದ ಹೊಡೆದು ಮಹಮದ್ ಹುಸೇನ್ ರನ್ನು ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಮಾತನಾಡಿದ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ, ಆರೋಪಿಗಳ ಶೋಧಕ್ಕೆ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.