ಆನೇಕಲ್ (ಬೆಂ.ಗ್ರಾ): ಕಳೆದ ತಿಂಗಳು 5ನೇ ತಾರೀಕಿನಂದು ಬಳ್ಳೂರು ಮೂಲದ ರೌಡಿಶೀಟರ್ ಶ್ರೀಕಾಂತ್ ಎಂಬಾತನನ್ನು ಹಳೇ ದ್ವೇಷದ ಕಾರಣಕ್ಕಾಗಿ ನಾಲ್ವರು ಸ್ನೇಹಿತರು ಕೊಲೆ ಮಾಡಿದ್ದರು. ಇದೀಗ ಈ ಆರೋಪಿಗಳನ್ನು ಅತ್ತಿಬೆಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಮಿಳುನಾಡಿನ ಸಿಪ್ಕಾಟ್ ಕೈಗಾರಿಕಾ ಪ್ರದೇಶದ ಬಳಿಯ ಬಾಲಾಜಿ ಕಾಸ್ಟಿಂಗ್ ಕಂಪನಿಯಲ್ಲಿ ಕಾರ್ಮಿಕನಾಗಿರುವ ಅರೇಹಳ್ಳಿ ನಿವಾಸಿ ರಮೇಶ್ (22), ಅತ್ತಿಬೆಲೆ ಶಾಕಾಂಬರಿ ಬಡಾವಣೆಯ ನಿವಾಸಿ ಡಿಹೆಚ್ಎಲ್ ಕಾರ್ಖಾನೆಯಲ್ಲಿ ಕಾರ್ಮಿಕನಾಗಿದ್ದ ನಿಖಿಲ್ ರಾಜ್ (23), ರಾಚಮಾನಹಳ್ಳಿ ನಿವಾಸಿ ಎನ್. ಕಾರ್ತಿಕ್ (25) ಮತ್ತು ಶಾಕಾಂಬರಿ ಬಡಾವಣೆಯ ಯುವಕ (20) ಕೊಲೆ ಮಾಡಿದ ಆರೋಪಿಗಳಾಗಿದ್ದಾರೆ. ಇವರನ್ನು ಹೊಸಕೋಟೆ ಬಳಿಯ ಅತ್ತಿಬೆಲೆ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕೊಲೆಯಾದ ಶ್ರೀಕಾಂತ್ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಮುಂತಾದ ಠಾಣೆಗಳಲ್ಲಿ ಸರಗಳ್ಳತನ ಹಾಗು ಅತ್ತಿಬೆಲೆ ಠಾಣೆಯಲ್ಲಿ ಮನೆ ಕಳ್ಳತನವೊಂದರಲ್ಲಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂಲತಃ ಬಳ್ಳೂರು ಮೂಲದವನಾದ ಈತ ಕೆಲವೊಮ್ಮೆ ವಾಹನ ಚಾಲಕನಾಗಿ ಹಾಗೂ ಪೈಂಟಿಂಗ್ ಕೆಲಸದಲ್ಲಿ ನಿರತನಾಗಿದ್ದ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಮಗುವಿನ ತಂದೆಯಾಗಿ ಅತ್ತಿಬೆಲೆಯಲ್ಲಿ ವಾಸವಿದ್ದ ಎಂಬ ಮಾಹಿತಿ ದೊರೆತಿದೆ.
ಘಟನೆಯ ಹಿನ್ನೆಲೆ:
ಅಕ್ಟೋಬರ್ 5ರ ರಾತ್ರಿ ಪೈಂಟಿಂಗ್ ಕೆಲಸ ಮುಗಿಸಿಕೊಂಡು ಮನೆಗೆ ಬಂದ ಶ್ರೀಕಾಂತ್ನನ್ನು ಸ್ನೇಹಿತ ಅರೇಹಳ್ಳಿ ಅಶೋಕ್ ಎಂಬುವವನು ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆದೊಯ್ದಿದ್ದಾನೆ. ಆರೋಪಿಗಳು ಶ್ರೀಕಾಂತ್ನನ್ನು ಕರೆದೊಯ್ದು ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ನಾಲ್ವರು ಸ್ನೇಹಿತರು ಕುಡಿದ ನೆಪದಲ್ಲಿ ರಾಗಿ ಹೊಲಕ್ಕೆ ಕರೆದುಕೊಂಡು ಹೋಗಿದ್ದಾರೆ. ಹಳೇ ದ್ವೇಷದ ಕತೆಯನ್ನು ಮಾತನಾಡುವಾಗ ಕೈಕೈ ಮಿಲಾಯಿಸಿಕೊಂಡಿದ್ದಾರೆ.
ಮೊದಲೇ ಅಪರಾಧ ಪ್ರಕರಣಗಳಲ್ಲಿ ಪಳಗಿದ್ದ ಶ್ರೀಕಾಂತ್ ಕೈ ಮೇಲಾಗುತ್ತಿದ್ದಂತೆ ಮೊದಲ ಆರೋಪಿ ರಮೇಶ್ ಬಿಯರ್ ಬಾಟಲಿಯಿಂದ ತಲೆಯ ಹಿಂಬದಿಗೆ ಹೊಡೆದ್ದಾನೆ. ಕೆಳಗೆ ಕುಸಿದು ಬಿದ್ದ ಶ್ರೀಕಾಂತ್ ತಲೆ ಮೇಲೆ ಆರೊಪಿಗಳು ಸೈಜುಗಲ್ಲಿನಿಂದ ಕುಕ್ಕಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.
ರಮೇಶ್ ಮತ್ತು ಶ್ರೀಕಾಂತ್ ಹಳೆಯ ಸ್ನೇಹಿತರಾಗಿದ್ದು, ಜಿಗಣಿ ಸುತ್ತಮುತ್ತ ಮಲಗುಂಡಿ ಶುಚಿಕಾರ್ಯದಲ್ಲಿ ಜೊತೆಯಾಗಿಯೇ ಕೆಲಸ ಮಾಡುತ್ತಿದ್ದರು. ಆದರೆ ಶ್ರೀಕಾಂತ್ನೊಂದಿಗೆ ಜಗಳವಾಗಿದ್ದ ಕಾರಣ ರಮೇಶ್ ತಮಿಳುನಾಡಿನ ಸಿಪ್ಕಾಟ್ ಬಳಿಯ ಕಾರ್ಖಾನೆಗೆ ಕೆಲಸಕ್ಕೆ ಸೇರಿಕೊಂಡಿದ್ದ.
ಆದರೆ ಶ್ರೀಕಾಂತ್ ತನಗೆ ಹಲವು ಬಾರಿ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದ ಎಂದು ರಮೇಶ್ ಹೇಳಿದ್ದಾನೆ. ಇದರ ಬೆನ್ನಲ್ಲೇ ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದ ರಮೇಶ್ ಹಾಗೂ ಆತನ ಸ್ನೇಹಿತರು ಶ್ರೀಕಾಂತ್ಗೆ ಬುದ್ದಿ ಕಲಿಸಬೇಕೆಂದೇ ಹುಟ್ಟುಹಬ್ಬದ ನೆಪಮಾಡಿ ಕರೆದೊಯ್ದಿದ್ದರು.