ಬೆಂಗಳೂರು: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಬಸವರಾಜ ಮುತ್ತಗಿಯ ಸಾಕ್ಷ್ಯ ವಿಚಾರಣೆಯನ್ನು ಮುಂದೂಡುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಬಸವರಾಜ ಮುತ್ತಗಿಯನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿದ್ದನ್ನು ಪ್ರಶ್ನಿಸಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿ, ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು, ''ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬಸವರಾಜ ಮುತ್ತಗಿ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಮುಂದಾಗಿದೆ. ಇದು ಸರಿಯಲ್ಲ, ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಬಾರದು'' ಎಂದು ಕೋರಿದರು.
ಬಸವರಾಜ ಮುತ್ತಗಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಯೋಗೇಶ್ ಗೌಡ ಕೊಲೆ ಪ್ರಕರಣದ ಮರು ತನಿಖೆಗೆ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು. ಆನಂತರ ಬಸವರಾಜ ಮುತ್ತಗಿ ಅರ್ಜಿ ಸಲ್ಲಿಸಿ, ಪ್ರಕರಣದ ಬಗ್ಗೆ ತನಗೆ ಸಾಕಷ್ಟು ಮಾಹಿತಿ ಇದ್ದು, ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕಿದೆ. ಹಾಗಾಗಿ, ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದರು.
ಆ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಒಪ್ಪಿತ್ತು. ಅದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ: ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ, ದೊಡ್ಡಜಾಲ ಕೆರೆಗಳ ಒತ್ತುವರಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್